ಐಸಿಐಸಿಐ ಬ್ಯಾಂಕ್ ಸಾಲ ಪ್ರಕರಣ: ಚಂದಾ ಕೋಚರ್ ₹64 ಕೋಟಿ ಲಂಚ ಸ್ವೀಕರಿಸಿರುವುದು ಸತ್ಯ – ನ್ಯಾಯಮಂಡಳಿ ತೀರ್ಪು

ನವದೆಹಲಿ: ಐಸಿಐಸಿಐ ಬ್ಯಾಂಕ್ನಿಂದ ವಿಡಿಯೊಕಾನ್ ಗ್ರೂಪ್ಗೆ 300 ಕೋಟಿ ರೂ ಸಾಲ ಮಂಜೂರು ಮಾಡಲು 64 ಕೋಟಿ ರೂ ಲಂಚ ಸ್ವೀಕರಿಸಿದ್ದಾರೆ ಎಂದು ಬ್ಯಾಂಕ್ನ ಮಾಜಿ ಸಿಇಒ ಚಂದಾ ಕೋಚರ್ (Chanda Kochhar) ವಿರುದ್ಧದ ಆರೋಪವನ್ನು ನ್ಯಾಯಮಂಡಳಿ ಸಮ್ಮತಿಸಿದೆ.

ಈ ಪ್ರಕರಣದಲ್ಲಿ ಕೋಚರ್ ಅವರು ತಪ್ಪಿತಸ್ಥೆ ಎಂದು ಮೇಲ್ಮನವಿ ನ್ಯಾಯಮಂಡಳಿ ತೀರ್ಮಾನಿಸಿದೆ ಎಂದು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯು ವರದಿ ಮಾಡಿದೆ.
ಜುಲೈ 3ರಂದು ನ್ಯಾಯಮಂಡಳಿಯ ತೀರ್ಪು ಪ್ರಕಟವಾಗಿತ್ತು. ಅದರಲ್ಲಿ ಚಂದಾ ಕೋಚರ್ 64 ಕೋಟಿ ರೂ ಲಂಚ ಸ್ವೀಕರಿಸಿರುವ ಸಂಬಂಧ ಉಲ್ಲೇಖ ಇದೆ. ತಮ್ಮ ಪತಿ ದೀಪಕ್ ಕೋಚರ್ ಅವರನ್ನು ಬಳಸಿಕೊಂಡು ಚಂದಾ ಕೋಚರ್ ಈ ಲಂಚ ಸ್ವೀಕರಿಸಿರುವುದು ಹೌದು ಎಂದು ಟ್ರಿಬ್ಯುನಲ್ ತನ್ನ ತೀರ್ಪಿನಲ್ಲಿ ತಿಳಿಸಿದೆ.
ವಿಡಿಯೋಕಾನ್ ಗ್ರೂಪ್ಗೆ ಐಸಿಐಸಿಐ ಬ್ಯಾಂಕ್ನಿಂದ 300 ಕೋಟಿ ರೂ ಸಾಲ ಮಂಜೂರಾದಾಗ ಬ್ಯಾಂಕ್ಗೆ ಚಂದಾ ಕೋಚರ್ ಅವರೇ ಸಿಇಒ ಆಗಿದ್ದರು. ಸಾಲ ವಿತರಣೆ ಆಗಿ ಒಂದು ದಿನದ ಬಳಿಕ ವಿಡಿಯೋಕಾನ್ ಗ್ರೂಪ್ಗೆ ಸೇರಿದ ಎಸ್ಇಪಿಎಲ್ ಸಂಸ್ಥೆಯ ಮೂಲಕ ನುಪವರ್ ರಿನಿವಬಲ್ಸ್ ಪ್ರೈ ಲಿಮಿಟೆಡ್ (ಎನ್ಆರ್ಪಿಎಲ್) ಕಂಪನಿಗೆ 64 ಕೋಟಿ ರೂ ವರ್ಗಾವಣೆ ಆಗಿದೆ.
ಈ ಎನ್ಆರ್ಪಿಎಲ್ ಸಂಸ್ಥೆಯಲ್ಲಿ ಚಂದಾ ಕೋಚರ್ ಪತಿ ದೀಪಕ್ ಕೋಚರ್ ಎಂಡಿಯಾಗಿದ್ದರು. ಹಿತಾಸಕ್ತಿ ಸಂಘರ್ಷದ ಸ್ಥಿತಿ ಇದ್ದರೂ ಚಂದಾ ಕೋಚರ್ ತಮ್ಮ ಅಧಿಕಾರ ಬಳಸಿ ವಿಡಿಯೋಕಾನ್ ಗ್ರೂಪ್ಗೆ ಸಾಲ ಮಂಜೂರು ಮಾಡಿಸಿದ್ದಾರೆ ಎಂದು ಜಾರಿ ನಿರ್ದೇಶನಾಲಯವು ಆರೋಪಿಸಿದೆ. ಮೇಲ್ಮನವಿ ನ್ಯಾಯಮಂಡಳಿ ಈ ಇಡಿ ವಾದವನ್ನು ಪುರಸ್ಕರಿಸಿದೆ.
2009ರ ಆಗಸ್ಟ್ನಲ್ಲಿ ಐಸಿಐಸಿಐ ಬ್ಯಾಂಕ್ ಸಿಇಒ ಚಂದಾ ಕೋಚರ್ ನೇತೃತ್ವದ ಸಮಿತಿಯು ವಿಡಿಯೋಕಾನ್ ಗ್ರೂಪ್ಗೆ 300 ಕೋಟಿ ರೂ ಸಾಲ ಮಂಜೂರಾತಿಗೆ ಅನುಮೋದನೆ ಕೊಟ್ಟಿತ್ತು. ಆ ಸಂದರ್ಭದಲ್ಲಿ ಕೋಚರ್ ಅವರು ಹಿತಾಸಕ್ತಿ ಸಂಘರ್ಷದ ಬಗ್ಗೆ ಸಮಿತಿಗೆ ಮಾಹಿತಿ ನೀಡಿರಲಿಲ್ಲ.
ಸಿಬಿಐ, ಇಡಿ ಸಂಸ್ಥೆಗಳು ಈ ಪ್ರಕರಣದ ತನಿಖೆ ನಡೆಸಿವೆ. 2019ರಲ್ಲಿ ಸಿಬಿಐ ಪ್ರಕರಣ ದಾಖಲಿಸಿದೆ. 11,000 ಪುಟಗಳ ಚಾರ್ಜ್ಶೀಟ್ ಸಲ್ಲಿಸಿದೆ. ಚಂದಾ ಕೋಚರ್, ದೀಪಕ್ ಕೋಚರ್, ವಿಡಿಯೋಕಾನ್ ಗ್ರೂಪ್ ಮಾಲೀಕ ವಿಎಸ್ ಧೂತ್ ಸೇರಿದಂತೆ ಹಲವರ ವಿರುದ್ಧ ಆರೋಪಗಳನ್ನು ದಾಖಲಿಸಲಾಗಿದೆ.
