ಐಸಿಸಿ ಅಂತರರಾಷ್ಟ್ರೀಯ ಅಂಪೈರ್ ಬಿಸ್ಮಿಲ್ಲಾ ಜಾನ್ ಶಿನ್ವಾರಿ ನಿಧನ: ಕ್ರಿಕೆಟ್ ಲೋಕಕ್ಕೆ ಆಘಾತ

ಐಸಿಸಿ ಅಂತರರಾಷ್ಟ್ರೀಯ ಅಂಪೈರ್‌ಗಳ ಸಮಿತಿಯ ಸದಸ್ಯ ಬಿಸ್ಮಿಲ್ಲಾ ಜಾನ್ ಶಿನ್ವಾರಿ ಸೋಮವಾರ ರಾತ್ರಿ ತಮ್ಮ 41ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಅಫ್ಘಾನಿಸ್ತಾನ ಮೂಲದ ಶಿನ್ವಾರಿ 34 ಏಕದಿನ ಪಂದ್ಯಗಳು, 26 ಟಿ20ಗಳು, 31 ಪ್ರಥಮ ದರ್ಜೆ, 51 ಲಿಸ್ಟ್ ಎ ಮತ್ತು 96 ದೇಶೀಯ ಟಿ20 ಪಂದ್ಯಗಳಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದಾರೆ ಎಂದು ದೇಶದ ಕ್ರಿಕೆಟ್ ಮಂಡಳಿ ತಿಳಿಸಿದೆ.

ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಪ್ರಕಾರ, 2017ರ ಡಿಸೆಂಬರ್‌ನಲ್ಲಿ ಶಾರ್ಜಾದಲ್ಲಿ ಅಫ್ಗಾನಿಸ್ತಾನ ಮತ್ತು ಐರ್ಲೆಂಡ್ ನಡುವಿನ ಏಕದಿನ ಪಂದ್ಯದಲ್ಲಿ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಅಂಪೈರ್ ಆಗಿ ಪದಾರ್ಪಣೆ ಮಾಡಿದರು.
ಶಿನ್ವಾರಿ ಅವರ ಅಂತ್ಯಕ್ರಿಯೆ ಮಂಗಳವಾರ ನಂಗರ್ಹಾರ್ ಪ್ರಾಂತ್ಯದ ಅಚಿನ್ ಜಿಲ್ಲೆಯಲ್ಲಿ ನಡೆಯಿತು. ಅವರಿಗೆ ಐದು ಗಂಡು ಮಕ್ಕಳು ಮತ್ತು ಏಳು ಹೆಣ್ಣುಮಕ್ಕಳಿದ್ದಾರೆ ಎಂದು ಅಫ್ಗಾನಿಸ್ತಾನದ ಟೋಲೊ ನ್ಯೂಸ್ ವರದಿ ಮಾಡಿದೆ.
‘ಅವರು ಅನಾರೋಗ್ಯಕ್ಕೆ ಒಳಗಾಗಿದ್ದರು ಮತ್ತು ಹೊಟ್ಟೆಯ ಕೊಬ್ಬನ್ನು ತೆಗೆದುಹಾಕಬೇಕೆಂದು ಪೇಶಾವರಕ್ಕೆ ಹೋದರು. ಅವರನ್ನು ಕೆಲವು ದಿನಗಳ ಕಾಲ ಆಸ್ಪತ್ರೆಯಲ್ಲಿ ಇರಿಸಲಾಗಿತ್ತು. ಶಸ್ತ್ರಚಿಕಿತ್ಸೆ ಮಾಡಲಾಯಿತು. ಆದರೆ ದುರದೃಷ್ಟವಶಾತ್, ಶಸ್ತ್ರಚಿಕಿತ್ಸೆಯ ನಂತರ ಸಂಜೆ 5 ಗಂಟೆಗೆ ಅವರು ನಿಧನರಾದರು. ನಾವು ಅವರ ದೇಹವನ್ನು ಅಂದೇ ರಾತ್ರಿ ತೋರ್ಖಾಮ್ ಮೂಲಕ ಹಿಂತಿರುಗಿಸಿ ಅಚಿನ್‌ನಲ್ಲಿರುವ ನಮ್ಮ ಪೂರ್ವಜರ ಸ್ಮಶಾನದಲ್ಲಿ ಅಂತ್ಯಕ್ರಿಯೆ ಮಾಡಿದ್ದೇವೆ’ ಎಂದು ಬಿಸ್ಮಿಲ್ಲಾ ಜಾನ್ ಶಿನ್ವಾರಿ ಅವರ ಸಹೋದರ ಸೆಯ್ದಾ ಜಾನ್ ಸುದ್ದಿವಾಹಿನಿಗೆ ತಿಳಿಸಿದರು.
ಐಸಿಸಿ ಅಧ್ಯಕ್ಷ ಜಯ್ ಶಾ ಅವರು ಬಿಸ್ಮಿಲ್ಲಾ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ‘ಆಟಕ್ಕೆ ಅವರ ಕೊಡುಗೆಗಳು ಅಪಾರವಾಗಿದ್ದು, ಕ್ರಿಕೆಟ್ ಸಮುದಾಯ ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತದೆ. ಈ ನಷ್ಟದಿಂದ ನಾವು ತೀವ್ರವಾಗಿ ದುಃಖಿತರಾಗಿದ್ದೇವೆ ಮತ್ತು ಅವರ ಕುಟುಂಬ ಮತ್ತು ಪ್ರೀತಿಪಾತ್ರರಿಗೆ ನಮ್ಮ ಸಂತಾಪ ಸೂಚಿಸುತ್ತೇವೆ’ ಎಂದು ಅವರು ಐಸಿಸಿಯ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಅಫ್ಗಾನಿಸ್ತಾನ ಕ್ರಿಕೆಟ್ ಮಂಡಳಿಯು ಅಂಪೈರ್‌ಗೆ ಶ್ರದ್ಧಾಂಜಲಿ ಸಲ್ಲಿಸಿದೆ. ‘ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯು ಅವರ ಕುಟುಂಬ, ಸ್ನೇಹಿತರು ಮತ್ತು ಇಡೀ ಅಫ್ಗಾನ್ ಕ್ರಿಕೆಟ್ ಬಂಧುಗಳಿಗೆ ತನ್ನ ಹೃತ್ಪೂರ್ವಕ ಸಂತಾಪ ಮತ್ತು ಆಳವಾದ ಸಹಾನುಭೂತಿಯನ್ನು ವ್ಯಕ್ತಪಡಿಸುತ್ತದೆ. ಸರ್ವಶಕ್ತನಾದ ಅಲ್ಲಾಹನು (SWT) ಅವರಿಗೆ ಜನ್ನಾದಲ್ಲಿ ಅತ್ಯುನ್ನತ ಹುದ್ದೆಗಳನ್ನು ನೀಡಲಿ ಮತ್ತು ಈ ಕಷ್ಟದ ಸಮಯದಲ್ಲಿ ಅವರ ಪ್ರೀತಿಪಾತ್ರರಿಗೆ ತಾಳ್ಮೆ ಮತ್ತು ಶಕ್ತಿಯನ್ನು ನೀಡಲಿ ಎಂದು ನಾವು ಪ್ರಾರ್ಥಿಸುತ್ತೇವೆ. ಬಿಸ್ಮಿಲ್ಲಾ ಜಾನ್ ಶಿನ್ವಾರಿ ಯಾವಾಗಲೂ ನಮ್ಮ ಹೃದಯ ಮತ್ತು ಆಲೋಚನೆಗಳಲ್ಲಿ ಉಳಿಯುತ್ತಾರೆ’ ಎಂದು X ಖಾತೆಯಲ್ಲಿ ಪೋಸ್ಟ್ ಮಾಡಿದೆ.
