‘ಸೋಶಿಯಲ್ ಮೀಡಿಯಾದಲ್ಲಿ ನೋಡಿದೆ’ ಎನ್ನುವ ಆಸಿಫ್ ಹೇಳಿಕೆ ಭಾರೀ ವೈರಲ್

ನವದೆಹಲಿ: ಭಾರತವು ಪಾಕಿಸ್ತಾನದಲ್ಲಿ ಭಯೋತ್ಪಾದಕ ಶಿಬಿರಗಳ ಮೇಲೆ ನಡೆಸಿದ ‘ಆಪರೇಷನ್ ಸಿಂದೂರ್’ ಕಾರ್ಯಾಚರಣೆಯ ಬಳಿಕ ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಅವರ ಹೇಳಿಕೆ ಭಾರೀ ಟೀಕೆಗೊಳಗಾಗಿದೆ.

ಭಾರತದ 5 ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದ್ದೇವೆ ಎಂಬ ಆಸಿಫ್ ಅವರ ಹೇಳಿಕೆಗೆ ಪುರಾವೆ ಕೇಳಿದಾಗ “ನಾನು ಅದನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಿದೆ” ಎಂದು ಅವರು ಉತ್ತರಿಸಿದ್ದಾರೆ.
ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ಆಸಿಫ್ ನಗೆಪಾಟಲಿಗೀಡಾಗಿದ್ದಾರೆ.
ಖವಾಜಾ ಆಸಿಫ್ ಅವರ ಹೇಳಿಕೆ
ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಅವರು ಸಿಎನ್ಎನ್ ಸುದ್ದಿ ವಾಹಿನಿಗೆ ಸಂದರ್ಶನ ನೀಡುವ ವೇಳೆ, “ಪಾಕಿಸ್ತಾನವು ಭಾರತದ 5 ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದೆ, ಇದರಲ್ಲಿ 3 ವಿಮಾನಗಳು ಜಮ್ಮು ಮತ್ತು ಕಾಶ್ಮೀರದಲ್ಲಿ ಕುಸಿದಿವೆ” ಎಂದು ದಾಖಲಿಸಿದ್ದಾರೆ. ಆದರೆ, ಸಂದರ್ಶನದಲ್ಲಿ ಪತ್ರಕರ್ತರು “ಇದಕ್ಕೆ ಪುರಾವೆ ಎಲ್ಲಿ?” ಎಂದು ಪ್ರಶ್ನಿಸಿದಾಗ, ಆಸಿಫ್ ಅವರು “ನಾನು ಅದನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಿದೆ” ಎಂದು ಉತ್ತರಿಸಿದರು. ಅದೂ ಸಹ ಭಾರತದ ಸೋಷಿಯಲ್ ಮೀಡಿಯಾದಲ್ಲೇ ನೋಡಿದೆ, ನಮ್ಮ ಸೋಷಿಯಲ್ ಮೀಡಿಯಾದಲ್ಲೂ ಅಲ್ಲ ಎಂದು ಆಸಿಫ್ ತಿಳಿಸಿದರು.
ಸಾಮಾಜಿಕ ಜಾಲತಾಣದಲ್ಲಿ ಟೀಕೆ
ಖವಾಜಾ ಆಸಿಫ್ ಅವರ ಈ ಹೇಳಿಕೆ ಎಕ್ಸ್ ನಲ್ಲಿ ಭಾರೀ ಟೀಕೆಗೊಳಗಾಗಿದೆ. ಬಳಕೆದಾರ ಪುರುಷ್ ಅಧಿಕಾರ್, “ಸಿಎನ್ಎನ್ ಈ ರೀತಿಯ ಮೂರ್ಖರೊಂದಿಗೆ ಸಂವಾದ ನಡೆಸುವುದಕ್ಕೆ ನಾಚಿಕೆಪಡಬೇಕು. ಭಯೋತ್ಪಾದಕರೊಂದಿಗೆ ಇಷ್ಟು ಸೌಮ್ಯವಾಗಿ ಮಾತನಾಡಬೇಡಿ” ಎಂದು ಟೀಕಿಸಿದ್ದಾರೆ. ಮತ್ತೊಬ್ಬ ಬಳಕೆದಾರ ಬಾಲ ಮುರುಗನ್, “ಈ ರೀತಿಯ ಹೇಳಿಕೆಗೆ ನಗು ಬರುತ್ತದೆ” ಎಂದು ವ್ಯಂಗ್ಯವಾಡಿದ್ದಾರೆ. “ಸಾಮಾಜಿಕ ಜಾಲತಾಣದಲ್ಲಿ ನೋಡಿದರೆ ಸಾಕು, ಇದು ಪಾಕಿಸ್ತಾನದ ರಕ್ಷಣಾ ಸಚಿವರ ಮಟ್ಟ” ಎಂದು ಹಲವರು ಟೀಕಿಸಿದ್ದಾರೆ.
