“ನಾನು ತಪ್ಪು ಮಾಡಿದೆ, ಭಾರತಕ್ಕೆ ಕರೆಸಿಕೊಳ್ಳಿ”: ಪಾಕಿಸ್ತಾನಕ್ಕೆ ಹೋದ ಮಹಿಳೆಯ ಅಳಲು!

ನವದೆಹಲಿ: 2025ರ ನವೆಂಬರ್‌ನಲ್ಲಿ ಸಿಖ್ ಯಾತ್ರಾ ಗುಂಪಿನೊಂದಿಗೆ ಪಾಕಿಸ್ತಾನಕ್ಕೆ (Pakistan) ಪ್ರಯಾಣ ಬೆಳೆಸಿ ನಂತರ ಅಲ್ಲಿಯ ವ್ಯಕ್ತಿಯನ್ನು ಮದುವೆಯಾದ ಭಾರತದ ಪ್ರಜೆ ಸರಬ್ಜೀತ್ ಕೌರ್ (Sarabjeet Kaur) ಇದೀಗ ತನ್ನ ಮನೆಗೆ ವಾಪಸಾಗಲು ಮನವಿ ಮಾಡಿಕೊಳ್ಳುತ್ತಿದ್ದಾರೆ.
ಅವರು ಅಲ್ಲಿ ತಮ್ಮ ಸ್ಥಿತಿಯ ಬಗ್ಗೆ ಅಳಲು ತೋಡಿಕೊಳ್ಳುತ್ತಿರುವ ಆಡಿಯೋ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

ವೈರಲ್ ಆಡಿಯೋದಲ್ಲಿ ಕಪುರ್ತಲಾ ಜಿಲ್ಲೆಯ ಅಮಾನಿಪುರ ಗ್ರಾಮದ 48 ವರ್ಷದ ಮಹಿಳೆ ಕೌರ್ ತಮ್ಮ ಭಾರತದಲ್ಲಿರುವ ಪತಿ ಕರ್ನೈಲ್ ಸಿಂಗ್ ಅವರೊಂದಿಗೆ ಕರೆಯಲ್ಲಿ ಮಾತನಾಡುತ್ತಿರುವುದು ಕೇಳಿಸಿಕೊಂಡಿದೆ. ತನ್ನನ್ನು ಇಲ್ಲಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುವಂತೆ ಒತ್ತಾಯಿಸಲಾಗಿತ್ತು. ಪಾಕಿಸ್ತಾನದಲ್ಲಿ ನನ್ನ ಸ್ಥಿತಿ ಚೆನ್ನಾಗಿಲ್ಲ ಎಂದು ಹೇಳುವುದು ಹಾಗೂ ಪದೇ ಪದೇ ತನ್ನಿಂದ ತಪ್ಪಾಗಿದೆ ಎಂದು ಹೇಳುತ್ತಾ ಅಳುವುದು ಆಡಿಯೋದಲ್ಲಿ ಕೇಳಿಸಿಕೊಂಡಿದೆ.

ನನಗೆ ಇಲ್ಲಿ ತುಂಬಾ ಕಷ್ಟ ಆಗುತ್ತಿದೆ. ನಾನು ನನ್ನ ಮಕ್ಕಳ ಬಳಿಗೆ ಹಿಂತಿರುಗಲು ಬಯಸುತ್ತೇನೆ. ಅವರು ಚಿಕ್ಕವರಿದ್ದಾಗಿನಿಂದ ನಾನು ಅವರನ್ನು ಬೆಳೆಸಿದ್ದೇನೆ. ಇಲ್ಲಿ ನಾನು ಪ್ರತಿ ಪೈಸೆ ಗಳಿಸಲು ಕಷ್ಟಪಡುತ್ತಿದ್ದೇನೆ. ಇಲ್ಲಿ ನನಗೆ ಧರಿಸಲು ಸರಿಯಾಗಿ ಬಟ್ಟೆ ಕೂಡಾ ಇಲ್ಲ. ನನಗೆ ಇಲ್ಲಿ ಸ್ವಾತಂತ್ರ್ಯವೂ ಇಲ್ಲ. ನನ್ನನ್ನು ಇಲ್ಲಿ ಇಚ್ಛೆಗೆ ವಿರುದ್ಧವಾಗಿ ಬಂಧಿಸಲಾಗಿದೆ ಎಂದು ಸರಬ್ಜೀತ್ ಹೇಳಿದ್ದಾಳೆ.
ಗುರುನಾನಕ್ ದೇವ್ ಅವರ 556 ನೇ ಜನ್ಮ ದಿನಾಚರಣೆಯಂದು ನಡೆದ ಉತ್ಸವಗಳಲ್ಲಿ ಭಾಗವಹಿಸಲು ಕಳೆದ ವರ್ಷ ಭಾರತದಿಂದ ವಾಘಾ ಗಡಿಯ ಮೂಲಕ ಪಾಕಿಸ್ತಾನಕ್ಕೆ ಪ್ರವೇಶಿಸಿದ 2,000 ಸಿಖ್ ಯಾತ್ರಿಕರಲ್ಲಿ ಸರಬ್ಜೀತ್ ಕೂಡ ಒಬ್ಬರಾಗಿದ್ದರು. ಹಬ್ಬದ ಕೆಲವು ದಿನಗಳ ನಂತರ ಇತರ ಎಲ್ಲಾ ಯಾತ್ರಿಕರು ಮನೆಗೆ ಮರಳಿದ್ದರು. ಆದರೆ ಸರಬ್ಜೀತ್ ಮಾತ್ರ ಮರಳಲಿಲ್ಲ.
ನಂತರ ಲಾಹೋರ್‌ನ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಈ ಬಗ್ಗೆ ಮಾಹಿತಿ ನೀಡಿ, ನವೆಂಬರ್ 4 ರಂದು ಪಾಕಿಸ್ತಾನಕ್ಕೆ ಬಂದ ಒಂದು ದಿನದ ನಂತರ ಲಾಹೋರ್‌ನಿಂದ ಸುಮಾರು 50 ಕಿ.ಮೀ ದೂರದಲ್ಲಿರುವ ಶೇಖುಪುರ ಜಿಲ್ಲೆಯ ನಾಸಿರ್ ಹುಸೇನ್ ಅವರೊಂದಿಗೆ ಕೌರ್ ವಿವಾಹವಾದರು ಎಂದು ಹೇಳಿದ್ದಾರೆ. ನಿಕಾಹ್ ಸಮಾರಂಭಕ್ಕೂ ಮುನ್ನ ಸರಬ್ಜೀತ್‌ಗೆ ಮುಸ್ಲಿಂ ಹೆಸರು ನೂರ್ ಎಂದು ಇಡಲಾಗಿತ್ತು.

ಕರ್ನೈಲ್ ಸಿಂಗ್ ಅವರ ಪ್ರಕಾರ, ತಮ್ಮ ಪತ್ನಿಗೆ ಬಂದೂಕು ತೋರಿಸಿ, ಬೆದರಿಕೆ ಹಾಕಿ ಬಲವಂತವಾಗಿ ಮದುವೆ ಮಾಡಿಸಲಾಗಿದೆ. ಅಲ್ಲಿ ಆಕೆಗೆ ಇಸ್ಲಾಂಗೆ ಮತಾಂತರಗೊಳ್ಳುವಂತೆ ಒತ್ತಾಯಿಸಲಾಗಿದೆ. ಎಲ್ಲವನ್ನೂ ಬಂದೂಕು ತೋರಿಸಿ ಮಾಡಲಾಗಿದೆ. ಸರಬ್ಜೀತ್ ಸಹಾಯಕ್ಕಾಗಿ ಬೇಡಿಕೊಳ್ಳುತ್ತಿರುವ ಮತ್ತು ಅಳುತ್ತಿರುವ ಪ್ರತಿಯೊಂದು ದಾಖಲೆಯೂ ತನ್ನ ಬಳಿ ಇದೆ. ಆಕೆ ಅವಳು ನನಗೆ ಸಹಾಯ ಮಾಡುವಂತೆ, ಅವಳನ್ನು ಮರಳಿ ಕರೆತರುವಂತೆ ಕೇಳುತ್ತಲೇ ಇದ್ದಾಳೆ. ಬಂಧನದ ಸಮಯದಲ್ಲಿ ಆಕೆಯ ಆರೋಗ್ಯ ತೀವ್ರವಾಗಿ ಹದಗೆಟ್ಟಿದೆ ಎಂದು ಸಿಂಗ್ ಹೇಳಿದ್ದಾರೆ.
ಕಳೆದ ವಾರ, ಪಾಕಿಸ್ತಾನಿ ಅಧಿಕಾರಿಗಳು ವಾಘಾ ಗಡಿಯ ಮೂಲಕ ಸರಬ್ಜೀತ್ ಕೌರ್ ಅವರನ್ನು ಭಾರತಕ್ಕೆ ಗಡಿಪಾರು ಮಾಡಲು ವ್ಯವಸ್ಥೆ ಮಾಡಿದ್ದರು ಎಂದು ವರದಿಯಾಗಿದೆ. ಆದರೆ ಹಠಾತ್ತನೆ ಯಾವುದೇ ಅಧಿಕೃತ ಕಾರಣವನ್ನು ಒದಗಿಸದೆ, ಈ ಕ್ರಮವನ್ನು ಸ್ಥಗಿತಗೊಳಿಸಲಾಗಿದೆ ಎನ್ನಲಾಗಿದೆ.