ನನ್ನನ್ನು ಮೌನಗೊಳಿಸಲಾಗಿದೆ, ಸೋಲಿಸಲಾಗಿಲ್ಲ: ಎಎಪಿ ವಿರುದ್ಧ ಸಂಸದ ರಾಘವ್ ಚಡ್ಡಾ ಕೆಂಡಾಮಂಡಲ

ಹೊಸದಿಲ್ಲಿ: “ನನ್ನನ್ನು ಮೌನಗೊಳಿಸಲಾಗಿದೆಯೇ ಹೊರತು, ಸೋಲಿಸಲಾಗಿಲ್ಲ” ಎಂದು ಆಪ್ ರಾಜ್ಯಸಭಾ ಸಂಸದ ರಾಘವ್ ಛಡ್ಡಾ ತಮ್ಮ ಪಕ್ಷಕ್ಕೆ ತಿರುಗೇಟು ನೀಡಿದ್ದಾರೆ. ಅವರನ್ನು ರಾಜ್ಯಸಭಾ ಉಪ ನಾಯಕ ಹುದ್ದೆಯಿಂದ ತೆಗೆದು ಹಾಕಿದ ಮರುದಿನ ಅವರಿಂದ ಈ ಹೇಳಿಕೆ ಹೊರಬಿದ್ದಿದೆ. ನನ್ನ ಪಕ್ಷವೇ ನನ್ನನ್ನು ಸಂಸದೀಯ ಕಲಾಪಗಳಲ್ಲಿ ಭಾಗವಹಿಸಲು ನಿರ್ಬಂಧಿಸಿದೆ ಎಂದೂ ಅವರು ದೂರಿದ್ದಾರೆ.
ಈ ಕುರಿತು ಎಕ್ಸ್ ನಲ್ಲಿ ವಿಡಿಯೊ ಪೋಸ್ಟ್ ಮಾಡಿರುವ ರಾಘವ್ ಛಡ್ವಾ “ನನಗೆ ಅವಕಾಶ ದೊರೆತಾಗಲೆಲ್ಲ ನಾನು ಜನರಿಗೆ ಸಂಬಂಧಿಸಿದ ವಿಷಯಗಳನ್ನು ಪ್ರಸ್ತಾಪಿಸುತ್ತಿದ್ದೆ. ಆದರೆ, ಜನರ ಸಮಸ್ಯೆಗಳನ್ನು ಮಾತನಾಡುವುದು ಅಪರಾಧವೆ? ನಾನು ಯಾವುದಾದರೂ ಅಪರಾಧವೆಸಗಿದ್ದೇನೆಯೆ?” ಎಂದು ಪ್ರಶ್ನಿಸಿದ್ದಾರೆ.

ನನಗೆ ಸಂಸತ್ತಿನಲ್ಲಿ ಮಾತನಾಡಲು ಅವಕಾಶ ನೀಡಬಾರದು ಎಂದು ಪಕ್ಷವು ಅಧಿಕೃತವಾಗಿ ರಾಜ್ಯಸಭಾ ಕಾರ್ಯಾಲಯಕ್ಕೆ ತಿಳಿಸಿದೆ ಎಂದೂ ಅವರು ಆರೋಪಿಸಿದ್ದಾರೆ.
“ಆಪ್ ಪಕ್ಷವು ನನಗೆ ಮಾತನಾಡಲು ಅವಕಾಶ ನೀಡದಂತೆ ಸಂಸತ್ತಿಗೆ ತಿಳಿಸಿದೆ. ನನ್ನ ಮೌನವನ್ನು ನನ್ನ ಸೋಲು ಎಂದು ಭಾವಿಸದಿರಿ ಎಂದು ನಾನು ಅವರಿಗೆ ಹೇಳಲು ಬಯಸುತ್ತೇನೆ” ಎಂದು ಅವರು ತಿರುಗೇಟು ನೀಡಿದ್ದಾರೆ.
“ನಾನು ಜನಸಾಮಾನ್ಯರಿಗೆ ಉಪಯುಕ್ತವಾಗುವ ಅನೇಕ ವಿಷಯಗಳನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸಿದ್ದೆ. ಅದರಿಂದ ಆಮ್ ಆದ್ಮ ಪಕ್ಷಕ್ಕೆ ಆಗಿರುವ ಹಾನಿಯಾದರೂ ಏನು? ನಾನು ಮಾತನಾಡದಂತೆ ಯಾರಾದರೂ ಯಾಕೆ ತಡೆಯಬೇಕು?” ಎಂದು ಅವರು ಪ್ರಶ್ನಿ ಸಿದ್ದಾರೆ.
ರಾಜ್ಯಸಭೆಯಲ್ಲಿ ಪಕ್ಷದ ಉಪ ನಾಯಕನ ಹುದ್ದೆಯಿಂದ ರಾಘವ್ ಛಡ್ಡಾರನ್ನು ತೆಗೆದು ಹಾಕಬೇಕು ಎಂದು ಗುರುವಾರ ಆಮ್ ಆದ್ಮಪಕ್ಷ ರಾಜ್ಯಸಭಾ ಕಾರ್ಯಾಲಯಕ್ಕೆ ಪತ್ರ ರವಾನಿಸಿದ ಬಳಿಕ ಈ ಬೆಳವಣಿಗೆ ನಡೆದಿದೆ. ಅವರ ಬದಲಿಗೆ ಪಂಜಾಬ್ ಸಂಸದ ಅಶೋಕ್ ಮಿತ್ತಲ್ ರನ್ನು ಆ ಸ್ಥಾನಕ್ಕೆ ಆಮ್ ಆದ್ಮಪಕ್ಷ ಶಿಫಾರಸು ಮಾಡಿದೆ.
ಈ ಪತ್ರದಲ್ಲಿ ಪಂಜಾಬ್ ನಿಂದ ರಾಜ್ಯಸಭಾ ಸಂಸದರಾಗಿರುವ ರಾಘವ್ ಛಡ್ಡಾ ಅವರಿಗೆ ಪಕ್ಷದ ಕೋಟಾದಿಂದ ಮಾತನಾಡಲು ಸಮಯಾವಕಾಶ ನಿಗದಿಗೊಳಿಸಬಾರದು ಎಂದೂ ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.