ತಪ್ಪು ಮಾಡಿಲ್ಲ, ಕ್ಷಮೆ ಕೇಳಲ್ಲ’: ಕಮಲ್ ಹಾಸನ್ ಹೇಳಿಕೆ ಮತ್ತೆ ವಿವಾದಕ್ಕೆ

‘ಕಮಲ್ ಹಾಸನ್ ಕನ್ನಡ ಭಾಷೆಯ ಬಗ್ಗೆ ನೀಡಿರುವ ಹೇಳಿಕೆ ರಾಜ್ಯದಾದ್ಯಂತ ವಿರೋಧಕ್ಕೆ ಒಳಗಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಇನ್ನೂ ಕೆಲವೆಡೆ ಕಮಲ್ ಹಾಸನ್ ಹೇಳಿಕೆ ಖಂಡಿಸಿ ಪ್ರತಿಭಟನೆ ನಡೆಸಲಾಗುತ್ತಿದೆ. ಫಿಲಂ ಚೇಂಬರ್ ಹಾಗೂ ಕೆಲ ಕನ್ನಡಪರ ಸಂಘಟನೆಗಳು, ‘ಕಮಲ್ ಹಾಸನ್ ಕ್ಷಮೆ ಕೇಳದ ಹೊರತು ಅವರ ನಟನೆಯ ‘ಥಗ್ ಲೈಫ್’ ಸಿನಿಮಾ ಬಿಡುಗಡೆಗೆ ಅವಕಾಶ ಕೊಡುವುದಿಲ್ಲ ಎಂದು ಪಟ್ಟು ಹಿಡಿದಿವೆ. ಕಮಲ್ ಹಾಸನ್ ಕೈಯಲ್ಲಿ ಕ್ಷಮೆ ಕೇಳಿಸಿಯೇ ಸಿದ್ದ ಎಂದು ಫಿಲಂ ಚೇಂಬರ್ ಪದಾಧಿಕಾರಿಗಳು ಹೇಳಿದ್ದಾರೆ. ಆದರೆ ಕಮಲ್ ಹಾಸನ್ ಮಂಡಿಯೂರಲು ನಕಾರಿದ್ದಾರೆ.

ಇಂದು (ಮೇ 30) ಚೆನ್ನೈನಲ್ಲಿ ಈ ಬಗ್ಗೆ ಮಾತನಾಡಿರುವ ನಟ ಕಮಲ್ ಹಾಸನ್, ‘ನಾನು ತಪ್ಪು ಮಾಡಿಲ್ಲ, ಹಾಗಾಗಿ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ’ ಎಂದಿದ್ದಾರೆ. ‘ನನ್ನಿಂದ ತಪ್ಪು ಆಗಿದ್ದರೆ ಮಾತ್ರ ಕ್ಷಮೆಯಾಚಿಸುವೆ, ನನ್ನಿಂದ ತಪ್ಪು ಆಗಿಲ್ಲ, ಹಾಗಾಗಿ ನಾನು ಕ್ಷಮೆ ಕೇಳಲ್ಲ, ಯಾವುದೇ ಬೆದರಿಕೆ, ಎಚ್ಚರಿಕೆಗೆ ನಾನು ಹೆದರುವುದಿಲ್ಲ, ನಾನು ಕಾನೂನು & ನ್ಯಾಯದ ಮೇಲೆ ನಂಬಿಕೆ ಇಟ್ಟಿದ್ದೇನೆ’ ಎಂದು ಸ್ಪಷ್ಟಪಡಿಸಿದ್ದಾರೆ.
ಕಮಲ್ ಹಾಸನ್ ಸಿನಿಮಾ ‘ಥಗ್ ಲೈಫ್’ನ ಕರ್ನಾಟಕದ ವಿತರಣೆ ಹಕ್ಕನ್ನು ಖರೀದಿಸಿರುವ ವೆಂಕಟೇಶ್ ಅವರನ್ನು ನಿನ್ನೆ ಫಿಲಂ ಚೇಂಬರ್ಗೆ ಕರೆಸಿ ಸಭೆ ನಡೆಸಲಾಗಿದ್ದು, ಕಮಲ್ ಹಾಸನ್ ಬಳಿ ಕ್ಷಮೆ ಕೇಳಿಸುವ ಜವಾಬ್ದಾರಿಯನ್ನು ವೆಂಕಟೇಶ್ ಹೆಗಲಿಗೆ ಹಾಕಲಾಗಿತ್ತು. ವೆಂಕಟೇಶ್ ಸಹ, ತಾವು ಪರಿಸ್ಥಿತಿಯ ಗಂಭೀರತೆಯನ್ನು ಕಮಲ್ ಅವರಿಗೆ ಮನವರಿಕೆ ಮಾಡಿ ಅಗತ್ಯ ಹೆಜ್ಜೆ ಇಡುವಂತೆ ಮನವಿ ಮಾಡುತ್ತೇವೆ ಎಂದಿದ್ದರು. ಅದಾದ 24 ಗಂಟೆಯೊಳಗೆ ಕಮಲ್ ಹಾಸನ್, ತಾವು ಕ್ಷಮೆ ಕೇಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಥಗ್ ಲೈಫ್’ ಸಿನಿಮಾದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ನಟ ಕಮಲ್ ಹಾಸನ್, ‘ತಮಿಳಿನಿಂದಲೇ ಕನ್ನಡ ಭಾಷೆ ಜನಿಸಿದೆ’ ಎಂದಿದ್ದರು. ಇದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಹಿರಿಯ ನಟರಾದ ಜಗ್ಗೇಶ್, ಸುಮಲತಾ, ಜಯಮಾಲಿನಿ, ಶ್ರೀನಾಥ್, ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ನಟಿ ರಮ್ಯಾ, ನಟ ಚೇತನ್ ಅಹಿಂಸ ಇನ್ನೂ ಕೆಲವರು ಕಮಲ್ ಹಾಸನ್ ಅವರ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ್ದರು.
ಕೇರಳದಲ್ಲಿ ಇದೇ ವಿವಾದದ ಬಗ್ಗೆ ಮಾತನಾಡಿದ್ದ ಕಮಲ್ ಹಾಸನ್, ‘ಭಾಷೆಯ ಬಗ್ಗೆ ಆಳವಾದ ಚರ್ಚೆ ಮಾಡುವ ಅರ್ಹತೆ ನನ್ನನ್ನೂ ಸೇರಿದಂತೆ ಯಾವ ರಾಜಕಾರಣಿಗಳಿಗೂ ಇಲ್ಲ. ಆದರೆ ನಾನು ಕನ್ನಡದ ಮೇಲಿನ ಪ್ರೀತಿಯಿಂದಲೇ ಆ ಮಾತನ್ನು ಹೇಳಿದ್ದೆ. ಪ್ರೀತಿಯಿಂದ ಆಡಿದ ಮಾತಿಗೆ ಕ್ಷಮೆ ಕೇಳಲು ಆಗದು, ಸ್ಪಷ್ಟನೆ ಮಾತ್ರವೇ ನೀಡಬಹುದು’ ಎಂದಿದ್ದರು. ಈಗ ಮತ್ತೊಮ್ಮೆ ತಾವು ಕ್ಷಮೆ ಕೇಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
