ವಾಕಿಂಗ್ ಹೊರಟಿದ್ದ ಮಹಿಳೆ ಮೇಲೆ ಹಸ್ಕಿ ಶ್ವಾನದ ಭೀಕರ ದಾಳಿ, ವಿಡಿಯೋ ವೈರಲ್!

ನಾಯಿಗಳನ್ನು ಮನುಷ್ಯನ ಉತ್ತಮ ಸ್ನೇಹಿತ ಎಂದು ಹೇಳುತ್ತಾರೆ. ಆದರೆ ಕೆಲವೊಂದು ಬಾರಿ ಇದೇ ಶ್ವಾನಗಳು ಮನುಷ್ಯನ ಮೇಲೆ ದಾಳಿ (Dog attack) ನಡೆಸುತ್ತವೆ. ಬೀದಿ ನಾಯಿಗಳಷ್ಟೇ ಅಲ್ಲ, ಸಾಕು ಪ್ರಾಣಿಗಳು ಕೂಡ ಹಾದಿ ಬೀದಿಯಲ್ಲಿ ಹೋಗುವವರ ಮೇಲೆ ದಾಳಿ ನಡೆಸುತ್ತವೆ. ಇಂತಹ ಸಾಕಷ್ಟು ಘಟನೆಗಳು ಈ ಹಿಂದೆಯೂ ನಡೆದಿವೆ.

ಇಲ್ಲೊಂದು ಅಂತಹದ್ದೇ ಘಟನೆ ನಡೆದಿದ್ದು, ಹಸ್ಕಿ ತಳಿಯ ಶ್ವಾನವೊಂದು ವಾಕಿಂಗ್ ಹೊರಟಿದ್ದ ಮಹಿಳೆಯ (Pet husky attack on woman) ಮೇಲೆ ಏಕಾಏಕಿ ದಾಳಿ ನಡೆಸಿದೆ. ಹರಿಯಾಣದ ಗುರುಗ್ರಾಮದಲ್ಲಿ ಈ ಆಘಾತಕಾರಿ ಘಟನೆ ನಡೆದಿದ್ದು, ಶ್ವಾನದ ದಾಳಿಗೆ ತುತ್ತಾಗಿ ಆ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಹಸ್ಕಿ ನಾಯಿಯ ಈ ಭಯಾನಕ ದಾಳಿಯ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ವಾಕಿಂಗ್ ಹೊರಟಿದ್ದ ಮಹಿಳೆಯ ಮೇಲೆ ಶ್ವಾನದ ದಾಳಿ:
ಇತ್ತ ಕಡೆಯಿಂದ ಮಾಲಕಿಯೊಂದಿಗೆ ನಡೆದುಕೊಂಡು ಹೋಗ್ತಿದ್ದ ಸಾಕು ನಾಯಿ ಹಸ್ಕಿ ಅತ್ತ ಕಡೆಯಿಂದ ವಾಕಿಂಗ್ ಮಾಡುತ್ತಾ ಬರುತ್ತಿದ್ದ ಮಹಿಳೆಯ ಮೇಲೆ ಏಕಾಏಕಿ ದಾಳಿ ನಡೆಸಿದಂತಹ ಆಘಾತಕಾರಿ ಘಟನೆ ನಡೆದಿದೆ. ಹರಿಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯ ವಸತಿ ಪ್ರದೇಶದ ಬಳಿ ವಾಕಿಂಗ್ ಹೋಗುತ್ತಿದ್ದ ಸಂದರ್ಭದಲ್ಲಿ ಮಹಿಳೆಯ ಮೇಲೆ ಶ್ವಾನ ದಾಳಿ ನಡೆಸಿದ್ದು, ಅಲ್ಲಿ ವಾಕಿಂಗ್ ಮಾಡ್ತಿದ್ದ ಇತರರು ಮಹಿಳೆಯನ್ನು ದಾಳಿಯಿಂದ ರಕ್ಷಿಸಿದ್ದಾರೆ. ದಾಳಿಯ ಪರಿಣಾಮ ಮಹಿಳೆಯ ಕೈಗೆ ಗಂಭೀರವಾದ ಗಾಯಗಳಾಗಿದ್ದು, ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯನ್ನು ಹುಟ್ಟು ಹಾಕಿದೆ.
ಈ ಕುರಿತ ವಿಡಿಯೋವನ್ನು ನಬಿಲಾ ಜಮಾಲ್ (Nabila Jamal) ಎಂಬವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, “ಗುರುಗ್ರಾಮದ ಗಾಲ್ಫ್ ಕೋರ್ಸ್‌ನಲ್ಲಿರುವ ಐಷಾರಾಮಿ ಅಪಾರ್ಟ್‌ಮೆಂಟ್‌ನಲ್ಲಿ ಮಹಿಳೆಯ ಮೇಲೆ ದಾಳಿ ನಡೆಸಿದ ಸಾಕು ನಾಯಿ ಹಸ್ಕಿ, ಶ್ನಾನ ದಾಳಿಯ ಕುರಿತು ಸುರಕ್ಷತೆ ಕ್ರಮಗಳನ್ನು ತೆಗೆದುಕೊಳ್ಳುವುದು ಬಹಳ ಅಗತ್ಯವಾಗಿದೆ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.
ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಹಸ್ಕಿ ತಳಿಯ ಶ್ವಾನವೊಂದು ಮಾಲಕಿಯೊಂದಿಗೆ ವಾಕಿಂಗ್ ಹೊರಟಿರುವ ದೃಶ್ಯವನ್ನು ಕಾಣಬಹುದು. ಅದೇನಾಯ್ತೋ ಗೊತ್ತಿಲ್ಲ ಈ ಶ್ವಾನ ಅತ್ತ ಕಡೆಯಿಂದ ವಾಕಿಂಗ್ ಮಾಡುತ್ತಾ ಬರುತ್ತಿದ್ದ ಮಹಿಳೆಯ ಮೇಲೆ ಏಕಾಏಕಿ ದಾಳಿ ನಡೆಸಿದೆ. ಶ್ವಾನ ಮಹಿಳೆಯ ಕೈಯನ್ನು ಕಚ್ಚಿ ಹಿಡಿದಿದ್ದು, ಕೊನೆಯಲ್ಲಿ ಅಲ್ಲಿದ್ದವರೆಲ್ಲರೂ ಸೇರಿ ಮಹಿಳೆಯನ್ನು ಭಯಾನಕ ದಾಳಿಯಿಂದ ರಕ್ಷಣೆ ಮಾಡಿದ್ದಾರೆ.
ಜುಲೈ 30 ರಂದು ಶೇರ್ ಮಾಡಲಾದ ಈ ವಿಡಿಯೋವನ್ನು 3 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಈ ವಿಷಯ ತುಂಬಾನೇ ಗಂಬೀರವಾದದ್ದು, ಮನುಷ್ಯರ ಜೀವಕ್ಕೆ ಬೆಲೆ ಇಲ್ವಾ?” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನೊಬ್ಬ ಬಳಕೆದಾರರು ʼಸಾಕು ನಾಯಿಗಳು ಬೀದಿ ನಾಯಿಗಳಷ್ಟೇ ಅಪಾಯಕಾರಿʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಇಲ್ಲಿ ನಾಯಿಗಳು ಸುರಕ್ಷಿತವಾಗಿದೆ, ಆದ್ರೆ ನಾಯಿಯಿಂದ ಮನುಷ್ಯರೇ ಅಪಾಯಕ್ಕೆ ಸಿಲುಕಿದ್ದಾರೆʼ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
