ಮದುವೆಯಾದ 3 ವರ್ಷಗಳಲ್ಲೇ 25 ಬಾರಿ ಇರಿದು ಕೊ*ಲೆ ಮಾಡಿದ ಪತಿ

ತುಮಕೂರು:ಮಂಡ್ಯದ ಹುಡುಗಿಯನ್ನು ಕಳೆದ 3 ವರ್ಷಗಳ ಹಿಂದ ಸಾಮಾಜಿಕ ಜಾಲತಾಣದ ಮೂಲಕ ಪರಿಚಯ ಮಾಡಿಕೊಂಡು ಮದುವೆ ಮಾಡಿಕೊಂಡಿದ್ದ ನವೀನ 3 ವರ್ಷಗಳ ಕಾಲ ಸಂಸಾರ ಮಾಡಿದ್ದಾನೆ. ಇತ್ತೀಚೆಗೆ ವೈವಾಹಿಕ ಕಲಹ ಹೆಚ್ಚಾಗಿ ಹೆಂಡತಿಯನ್ನೇ ಕೊಲೆ ಮಾಡಿದ ಆಘಾತಕಾರಿ ಘಟನೆ ತುಮಕೂರು ಜಿಲ್ಲೆಯ ಅಂತರಸನಹಳ್ಳಿ ಪ್ರದೇಶದಲ್ಲಿ ನಡೆದಿದೆ.

ಮಂಡ್ಯ ಮೂಲದ ಗೀತಾ (22) ಎಂಬ ಯುವತಿಯನ್ನೇ ಪತಿ ನವೀನ್ (25) ಚಾಕುವಿನಿಂದ 25ಕ್ಕೂ ಹೆಚ್ಚು ಬಾರಿ ಚುಚ್ಚಿ ಅಮಾನುಷವಾಗಿ ಹತ್ಯೆ ಮಾಡಿ ಪರಾರಿ ಆಗಿದ್ದಾನೆ.
ಕೊರಟಗೆರೆ ತಾಲ್ಲೂಕಿನ ಅಮೃತಗಿರಿ ಗ್ರಾಮದ ನವೀನ್ ಹಾಗೂ ಮಂಡ್ಯ ಜಿಲ್ಲೆ ಗಣನೂರಿನ ಗೀತಾ ಮೂರು ವರ್ಷಗಳ ಹಿಂದೆ ಮದುವೆಯಾಗಿದ್ದು, ಕಳೆದ ಒಂದೂವರೆ ವರ್ಷಗಳಿಂದ ತುಮಕೂರು ಹೊರವಲಯದ ಅಂತರಸನಹಳ್ಳಿಯಲ್ಲಿ ಬಾಡಿಗೆ ಮನೆಗೆ ವಾಸವಾಗಿದ್ದರು. ಈ ದಂಪತಿಗೆ ಒಂದೂವರೆ ವರ್ಷದ ಗಂಡು ಮಗು ಕೂಡ ಇದೆ. ಗೀತಾ ಈಚೆಗೆ ಮಗುವನ್ನು ತವರು ಮನೆಗೆ ಕಳುಹಿಸಿದ್ದರು.

ಮದುವೆಯಾದ ನಂತರ ಪತಿಯ ನಡವಳಿಕೆಯಲ್ಲಿ ವ್ಯತ್ಯಾಸ ಕಂಡುಬಂದಿದೆ. ವೈವಾಹಿಕ ಕಲಹಗಳ ಹಿನ್ನಲೆಯಲ್ಲಿ ಇಬ್ಬರ ನಡುವೆ ಪದೇಪದೇ ಜಗಳ ನಡೆಯುತ್ತಿದ್ದುದಾಗಿ ನೆರೆಹೊರೆಯವರು ಹೇಳುತ್ತಿದ್ದಾರೆ. ಕೆಲವೊಮ್ಮೆ ಮನೆಯ ಮಾಲೀಕರೇ ಜಗಳ ಬಿಡಿಸುವಂತ ಸ್ಥಿತಿಯೂ ಉಂಟಾಗಿತ್ತು. ಈ ಮಧ್ಯೆ ಕೆಲವು ತಿಂಗಳು ಬಾಡಿಗೆ ಕೊಡುವ ಸ್ಥಿತಿಯಲ್ಲಿಲ್ಲವೆಂದು ನವೀನ್ ಅವರು ಮನೆ ಖಾಲಿ ಮಾಡಿಕೊಂಡಿದ್ದರು. ಆದರೆ ಇದೀಗ ಮತ್ತೆ ಹಿಂದಿನ ಬಾಡಿಗೆ ಮನೆಯಲ್ಲಿಯೇ ವಾಸವಿದ್ದರು.
ಹತ್ಯೆಯ ಭೀಕರ ದೃಶ್ಯ ಬೆಳಕಿಗೆ:
ನಿನ್ನೆ ರಾತ್ರಿ ಗಂಡ ಹೆಂಡತಿಯ ನಡುವೆ ಗಲಾಟೆ ನಡೆದಿದ್ದು, ಅದೇ ವೇಳೆ ನವೀನ್ ಪತ್ನಿ ಗೀತಾಳನ್ನು ಚಾಕುವಿನಿಂದ 25ಕ್ಕೂ ಹೆಚ್ಚು ಬಾರಿ ಚುಚ್ಚಿ ಭೀಕರವಾಗಿ ಹತ್ಯೆ ಮಾಡಿದ್ದಾನೆ. ಇಂದು ಬೆಳಿಗ್ಗೆ ಬಾಡಿಗೆ ಹಣ ತರುತ್ತೇನೆಂದು ಮಾಲೀಕರ ಮಗ ಬಂದು ಮನೆಯ ಬಾಗಿಲು ತೆರೆದಾಗ ಗೀತಾ ರಕ್ತಪಾತದ ಸ್ಥಿತಿಯಲ್ಲಿ ಸಾವನ್ನಪ್ಪಿರುವುದು ಕಂಡುಬಂದಿದೆ. ಕೂಡಲೇ ಈ ಕುರಿತು ಮಾಲೀಕರು ಪೊಲೀಸರು ಹಾಗೂ ಸಂಬಂಧಿಕರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು ಸ್ಥಳ ಪರಿಶೀಲನೆ:
ಘಟನಾ ಸ್ಥಳಕ್ಕೆ ತುಮಕೂರು ಗ್ರಾಮಾಂತರ ಎಸ್‌ಪಿ, ಡಿವೈಎಸ್‌ಪಿ, ಎಎಸ್‌ಪಿ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶ್ವಾನ ದಳ, ಬೆರಳಚ್ಚು ತಂಡ ಸ್ಥಳಕ್ಕೆ ಧಾವಿಸಿವೆ. ಘಟನೆಯ ಹಿನ್ನೆಲೆ ಮತ್ತು ಸತ್ಯಾಂಶ ಹೊರ ತರುವ ದೃಷ್ಟಿಯಿಂದ ತನಿಖೆ ಆರಂಭಿಸಲಾಗಿದ್ದು, ಹತ್ಯೆ ಬಳಿಕ ನಾಪತ್ತೆಯಾಗಿರುವ ನವೀನ್ ಪತ್ತೆ ಹಚ್ಚಲು ಭಾರೀ ಹುಡುಕಾಟ ನಡೆದಿದೆ. ಈವರೆಗೂ ಕೊಲೆ ಆರೋಪಿ ನವೀನನ ಸುಳಿವು ಸಿಕ್ಕಿಲ್ಲ.
