ಆಸ್ತಿ ಮಾರಲು ಒಪ್ಪದ ಪತ್ನಿಯನ್ನು ಮಚ್ಚಿನಿಂದ ಹ*ಲ್ಲೆ ಮಾಡಿ ಕೊಂದ ಪತಿ

ಮೈಸೂರು: ಆಸ್ತಿ ಮಾರಲು ಒಪ್ಪದ ಪತ್ನಿಯನ್ನು ಪತಿ ಕೊಲೆ ಮಾಡಿರುವ ಘಟನೆ ಮೈಸೂರಿನಲ್ಲಿ (Mysore) ನಡೆದಿದೆ. ಮೈಸೂರಿನ ಕುಂಬಾರಕೊಪ್ಪಲು ಮಹದೇಶ್ವರ ಬಡಾವಣೆಯಲ್ಲಿ ಘಟನೆ ನಡೆದಿದ್ದು 54 ವರ್ಷದ ಗಾಯತ್ರಿ ಕೊಲೆಯಾಗಿದ್ದಾರೆ. 64 ವರ್ಷದ ಪಾಪಣ್ಣ ಕೊಲೆ ಮಾಡಿದ ಆರೋಪಿ.

ಆರೋಪಿ ಪಾಪಣ್ಣ ರಿಯಲ್ ಎಸ್ಟೇಟ್ ಉದ್ಯಮ ಮಾಡಲು ಹೋಗಿ, ನಷ್ಟ ಅನುಭವಿಸಿ, ಸಾಲ ಮಾಡಿಕೊಂಡಿದ್ದನು. ಜೊತೆಗೆ ಪಾಪಣ್ಣ ಮದ್ಯವ್ಯಸನಿಯಾಗಿದ್ದರು. ಕೈಯಲ್ಲಿ ಹಣ ಓಡಾಡುತ್ತಿದ್ದಾಗ ಎಲ್ಲ ಚೆನ್ನಾಗಿಯೇ ಇತ್ತು. ಆದರೆ, ಲಾಸ್ ಆದ ಮೇಲೆ ಹಣಕ್ಕೆ ಪರದಾಟ ಶುರವಾಗಿತ್ತು. ಇದಕ್ಕಾಗಿ ತನ್ನ ಆಸ್ತಿ ಮಾರಲು ಪಾಪಣ್ಣ ಮುಂದಾಗಿದ್ದನು. ಆದರೆ, ಪತ್ನಿ ಗಾಯತ್ರಿ ಆಸ್ತಿ ಮಾರಾಟಕ್ಕೆ ಒಪ್ಪಿರಲಿಲ್ಲ. ಇದೇ ವಿಚಾರಕ್ಕೆ ಇಬ್ಬರ ನಡುವೆ ಜಗಳವಾಗಿದೆ.
ಈ ವೇಳೆ ಗಾಯತ್ರಿ ದೋಸೆ ತವಾದಿಂದ ಪತಿಗೆ ಹೊಡೆದಿದ್ದಾರೆ. ಇದರಿಂದ ಕೆರಳಿದ ಪಾಪಣ್ಣ, ಮಚ್ಚಿನಿಂದ ಆಕೆ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾನೆ. ಸದ್ಯ ಆರೋಪಿ ಪಾಪಣ್ಣನನ್ನು ಬಂಧಿಸಿರುವ ವಿಜಯನಗರ ಠಾಣೆ ಪೊಲೀಸರು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪರಿಚಿತ ವ್ಯಕ್ತಿಯ ಭೀಕರ ಕೊಲೆ
ಕಲಬುರಗಿ: ಮಾರಕಾಸ್ತ್ರಗಳಿಂದ ಕೊಚ್ಚಿ ಅಪರಿಚಿತ ವ್ಯಕ್ತಿಯನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ಜೇವರ್ಗಿ ಕಾಲೋನಿಯ ರೈಲ್ವೆ ಸೇತುವೆ ಬಳಿ ನಡೆದಿದೆ. ಸುಮಾರು 35 ರಿಂದ 40 ವರ್ಷದ ವ್ಯಕ್ತಿಯನ್ನು ಆರೋಪಿಗಳು ಕೊಂದಿದ್ದಾರೆ. ರೈಲ್ವೆ ಅಂಡರ್ ಬ್ರಿಡ್ಜ್ ಬಳಿ ವ್ಯಕ್ತಿಯನ್ನು ಕರೆತಂದು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಕಲಬುರಗಿಯ ಸ್ಟೇಷನ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
