ಹದಿನೈದು ವರ್ಷಗಳ ದಾಂಪತ್ಯಕ್ಕೆ ಎದುರಾದ ನಂಬಿಕೆ ದ್ರೋಹ: ಪತ್ನಿಯ ಅನೈತಿಕ ಸಂಬಂಧವನ್ನು ಜಿಪಿಎಸ್ ಮೂಲಕ ಬಯಲಿಗೆಳೆದ ಪತಿ

ಪಂಜಾಬ್ : ಅಮೃತಸರದಲ್ಲಿ ಮನುಷ್ಯ ಸಂಬಂಧಗಳ ಮೇಲಿನ ನಂಬಿಕೆಯನ್ನೇ ಪ್ರಶ್ನಿಸುವಂತಹ ಘಟನೆಯೊಂದು ನಡೆದಿದ್ದು, 15 ವರ್ಷಗಳ ಕಾಲ ಸಂಸಾರ ನಡೆಸಿದ ಪತಿಯೊಬ್ಬ ತನ್ನ ಪತ್ನಿ ಬೇರೊಬ್ಬ ವ್ಯಕ್ತಿಯೊಂದಿಗೆ ಹೋಟೆಲ್‌ನಲ್ಲಿ ಇರುವುದನ್ನು ಜಿಪಿಎಸ್ (GPS) ತಂತ್ರಜ್ಞಾನದ ಸಹಾಯದಿಂದ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. 2010ರಲ್ಲಿ ಹಿಮಾನಿ ಎಂಬಾಕೆಯನ್ನು ವಿವಾಹವಾಗಿದ್ದ ರವಿ, ಇಬ್ಬರು ಮಕ್ಕಳೊಂದಿಗೆ ಸುಂದರ ಜೀವನದ ಕನಸು ಕಂಡಿದ್ದರು. ಆದರೆ, ಪತ್ನಿಯ ನಡವಳಿಕೆಯ ಮೇಲೆ ಅನುಮಾನ ಬಂದ ಕಾರಣ ಆಕೆಯ ಸ್ಕೂಟಿಗೆ ರಹಸ್ಯವಾಗಿ ಜಿಪಿಎಸ್ ಟ್ರ್ಯಾಕರ್ ಅಳವಡಿಸಿದ್ದರು. ಮಧ್ಯಾಹ್ನದ ವೇಳೆ ಪತ್ನಿ ಮನೆಯಿಂದ ಹೊರಹೋಗಿ ಫೋನ್ ಕರೆಗಳನ್ನು ಸ್ವೀಕರಿಸದಿದ್ದಾಗ ಆತಂಕಗೊಂಡ ರವಿ, ಟ್ರ್ಯಾಕರ್ ಮೂಲಕ ಆಕೆ ಇರುವ ಸ್ಥಳವನ್ನು ಪತ್ತೆಹಚ್ಚಿ ಹೋಟೆಲ್ ಒಂದಕ್ಕೆ ತಲುಪಿದ್ದರು. ಅಲ್ಲಿ ತನ್ನ ಪತ್ನಿ ಪರಪುರುಷನೊಂದಿಗೆ ಇರುವುದನ್ನು ಕಂಡು ಬೆಚ್ಚಿಬಿದ್ದ ರವಿ, ತನ್ನೆಲ್ಲಾ ಕನಸುಗಳು ಕಣ್ಣೆದುರೇ ನುಚ್ಚುನೂರಾದ ನೋವಿನಲ್ಲಿ ಹೋಟೆಲ್ ಮುಂದೆಯೇ ಗಳಗಳನೆ ಕಣ್ಣೀರಿಟ್ಟಿದ್ದಾರೆ.


ವಿಶೇಷವೆಂದರೆ, ಈ ಹಿಂದೆಯೂ ಅಂದರೆ 2018ರಲ್ಲಿ ಹಿಮಾನಿ ಇದೇ ರೀತಿ ಬೇರೊಬ್ಬನ ಜೊತೆ ಹೋಟೆಲ್‌ನಲ್ಲಿ ಸಿಕ್ಕಿಬಿದ್ದಿದ್ದರು. ಆಗ ಮಕ್ಕಳ ಭವಿಷ್ಯ ಹಾಗೂ ಪತ್ನಿಯ ಪೋಷಕರ ಮನವಿಯ ಮೇರೆಗೆ ರವಿ ದೊಡ್ಡ ಮನಸ್ಸು ಮಾಡಿ ಕ್ಷಮಿಸಿ ಆಕೆಯನ್ನು ಮನೆಗೆ ಕರೆದುಕೊಂಡು ಬಂದಿದ್ದರು. ತಪ್ಪು ಮನುಷ್ಯ ಸಹಜ, ಮುಂದಾದರೂ ಬದಲಾಗಬಹುದು ಎಂಬ ರವಿಯ ನಂಬಿಕೆಗೆ ಈಗ ಮತ್ತೆ ಪೆಟ್ಟು ಬಿದ್ದಿದೆ.

ತಾನು ಮಕ್ಕಳಿಗಾಗಿ ಮತ್ತು ಸಂಸಾರಕ್ಕಾಗಿ ಮಾಡಿದ ಎಲ್ಲಾ ತ್ಯಾಗಗಳು ವ್ಯರ್ಥವಾಯಿತಲ್ಲ ಎಂಬ ನೋವು ರವಿ ಅವರನ್ನು ಕಾಡುತ್ತಿದೆ. ಮದುವೆಯಂತಹ ಪವಿತ್ರ ಬಂಧದಲ್ಲಿ ನಂಬಿಕೆ ಎಷ್ಟು ಮುಖ್ಯ ಮತ್ತು ಆ ನಂಬಿಕೆಗೆ ದ್ರೋಹ ಬಗೆದಾಗ ಒಂದು ಕುಟುಂಬ ಹೇಗೆ ಛಿದ್ರವಾಗುತ್ತದೆ ಎಂಬುದಕ್ಕೆ ಈ ಹೃದಯವಿದ್ರಾವಕ ಘಟನೆಯೇ ಸಾಕ್ಷಿಯಾಗಿದೆ. ಪತ್ನಿಯ ಈ ನಂಬಿಕೆ ದ್ರೋಹದಿಂದ ಕಂಗೆಟ್ಟಿರುವ ಪತಿ ರವಿ, ಈಗ ಕಾನೂನು ಹೋರಾಟದ ಹಾದಿ ಹಿಡಿಯುವ ಅನಿವಾರ್ಯತೆಗೆ ಸಿಲುಕಿದ್ದಾರೆ.
