ಹುಲಿಕಲ್ ಘಾಟ್ ದುರಂತ: ಮಣ್ಣಿನಡಿ ಸಿಲುಕಿದ್ದ ಮೂವರು ಕಾರ್ಮಿಕರು ಸಾವು; ಘಾಟಿಯಲ್ಲಿ ಸಂಚಾರ ಸಂಪೂರ್ಣ ನಿಷೇಧ

ಶಿವಮೊಗ್ಗ: ಜಿಲ್ಲೆಯ ಹುಲಿಕಲ್ (ಬಾಳೇಬರ) ಘಾಟ್‌ನ ಹೇರ್‌ಪಿನ್ ಕ್ರಾಸ್‌ನಲ್ಲಿ ಕಾಂಕ್ರೀಟ್ ವಾಲ್ ಕಾಮಗಾರಿ ವೇಳೆ ಸಂಭವಿಸಿದ ಮಣ್ಣುಕುಸಿತದಲ್ಲಿ ಮಣ್ಣಿನಡಿ ಸಿಲುಕಿದ್ದ ಮೂವರು ಕಾರ್ಮಿಕರ ಮೃತದೇಹಗಳು ಪತ್ತೆಯಾಗಿವೆ.
ಎಸ್‌ಡಿಆಎಫ್ ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಸತತ ಕಾರ್ಯಾಚರಣೆ ನಡೆಸಿ ಮೃತದೇಹಗಳನ್ನು ಪತ್ತೆ ಹಚ್ಚಿದ್ದಾರೆ.
ಹೊಸನಗರ ಹೋಬಳಿಯ ಚಕ್ಕಾರು ಗ್ರಾಮದ ರಾಘವೇಂದ್ರ, ಹಾವೇರಿ ಜಿಲ್ಲೆಯ ಶಬ್ಬಿರ್ (40) ಹಾಗೂ ರಾಜು ಮೃತಪಟ್ಟವರು ಎಂದು ಗುರುತಿಸಲಾಗಿದೆ ಗುರುವಾರ ರಾತ್ರಿ ಎರಡು ಮೃತದೇಹಗಳು ಪತ್ತೆಯಾಗಿದ್ದರೆ, ಇಂದು ಬೆಳಗ್ಗೆ ಸುಮಾರು 3 ಗಂಟೆ ಸುಮಾರಿಗೆ ಶಬ್ಬಿರ್ ಅವರ ಮೃತದೇಹ ಪತ್ತೆಯಾಗಿದೆ.
ರಕ್ಷಣಾ ಕಾರ್ಯಾಚರಣೆ ಪೂರ್ಣಗೊಂಡಿದ್ದು ಮೃತದೇಹಗಳನ್ನು ನಗರದ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದು ಅವರಿಗೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನಾ ಸ್ಥಳಕ್ಕೆ ಶಾಸಕ ಆರಗ ಭೇಟಿ :
ಘಟನಾ ಸ್ಥಳಕ್ಕೆ ಆರಗ ಜ್ಞಾನೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಆಸ್ಪತ್ರೆಗೆ ತೆರಳಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು.
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ನಡೆಯಬಾರದ ಘಟನೆ ನಡೆದಿದೆ. ಮೃತರ ಕುಟುಂಬಗಳಿಗೆ ದುಃಖ ಭರಿಸುವ ಶಕ್ತಿ ದೊರಕಲಿ. ಅವರ ಜೊತೆ ನಾವು ಇರುತ್ತೇವೆ’ ಎಂದು ಸಾಂತ್ವನ ಹೇಳಿದರು.
ಹುಲಿಕಲ್ ಘಾಟ್ ನಲ್ಲಿ ವಾಹನ ಸಂಚಾರ ಸಂಪೂರ್ಣ ಬಂದ್:
ಭೂ ಕುಸಿತ ಸಂಭವಿಸಿದ ಬೆನ್ನಲ್ಲೇ ರಾಜ್ಯ ಹೆದ್ದಾರಿ-52 ರ ಹುಲಿಕಲ್ ಘಾಟ್ ನಲ್ಲಿ ಸಂಚಾರ ಸಂಪೂರ್ಣ ನಿಷೇಧ ಹೇರಲಾಗಿದೆ.
ಶಿವಮೊಗ್ಗ- ತೀರ್ಥಹಳ್ಳಿ- ನಗರ- ಹುಲಿಕಲ್ ಘಾಟ್- ಕುಂದಾಪುರ ಸಂಪರ್ಕಿಸುವ ರಸ್ತೆ ಇದಾಗಿದ್ದು ಭಾರೀ ಪ್ರಮಾಣದಲ್ಲಿ ಭೂ ಕುಸಿತ ಆಗಿರುವ ಹಿನ್ನೆಲೆ- ಸಂಚಾರ ನಿಷೇಧ ಮಾಡಲಾಗಿದೆ. ಮುಂದಿನ ಆದೇಶದವರೆಗೆ ಹುಲಿಕಲ್ ಘಾಟಿಯಲ್ಲಿ ಸಂಚಾರ ರದ್ದು ಮಾಡಲಾಗಿದೆ.
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ನಗರ ಬಳಿಯ ಹುಲಿಕಲ್ ಘಾಟ್ ಕರಾವಳಿ ಮತ್ತು ಮಧ್ಯ ಕರ್ನಾಟಕಕ್ಕೆ ಸಂಪರ್ಕ ಕೊಂಡಿಯಾಗಿತ್ತು. ತೀರ್ಥ ಹಳ್ಳಿಯ ಆಗುಂಬೆ ಘಾಟ್ ಮತ್ತು ಹೊಸನಗರ ತಾಲೂಕಿನ ನಿಟ್ಟೂರು ನಾಗೋಡಿ ಘಾಟ್ ನಲ್ಲಿ ಸಂಚರಿಸಲು ಜಿಲ್ಲಾಡಳಿತ ಸೂಚನೆ ನೀಡಿದ್ದು ವಾಹನ ಸವಾರರು ಪರ್ಯಾಯ ಮಾರ್ಗ ಬಳಸಲು ಸೂಚನೆ ನೀಡಲಾಗಿದೆ.
