HUL ಕಂಪನಿಗೆ ಪ್ರಥಮ ಮಹಿಳಾ CEO: ಪ್ರಿಯಾ ನಾಯರ್ ನೇಮಕ, 93 ವರ್ಷಗಳ ಇತಿಹಾಸದಲ್ಲಿ ಹೊಸ ಅಧ್ಯಾಯ

ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್ ತನ್ನ ಮುಂದಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ(CEO) ಮತ್ತು ವ್ಯವಸ್ಥಾಪಕ ನಿರ್ದೇಶಕಿ(MD)ಯಾಗಿ ಪ್ರಿಯಾ ನಾಯರ್ ಅವರನ್ನು ನೇಮಕ ಮಾಡಿದೆ. ಈ ಪ್ರತಿಷ್ಠಿತ ಕಂಪೆನಿ ತನ್ನ 93 ವರ್ಷಗಳ ಪ್ರಯಾಣದಲ್ಲಿ ಮೊದಲ ಬಾರಿಗೆ ಮಹಿಳೆಯೊಬ್ಬರನ್ನು ಉನ್ನತ ಸ್ಥಾನಕ್ಕೆ ಆಯ್ಕೆ ಮಾಡಿರುವುದು ವಿಶೇಷ. ಈ ಮೂಲಕ ಪ್ರಿಯಾ ನಾಯರ್ HUL ನ ಮೊದಲ ಮಹಿಳಾ ಸಿಇಒ ಎಂಬ ಪಟ್ಟವನ್ನು ಗಿಟ್ಟಿಸಿಕೊಂಡಿದ್ದಾರೆ. ನಾಯರ್ ಆಗಸ್ಟ್ 1 ರಿಂದ ಕಂಪನಿಯ ಹೊಸ CEO ಮತ್ತು MD ಆಗಿ ನೇಮಕಗೊಳ್ಳಲಿದ್ದಾರೆ ಎಂದು ವರದಿಯಾಗಿದೆ.

ಕಳೆದ 30 ವರ್ಷಗಳಿಂದ HUL ಕಂಪನಿಯೊಂದಿಗೆ ಸಂಬಂಧ ಹೊಂದಿದ್ದ ಪ್ರಿಯಾ ಡವ್ ಮತ್ತು ಸನ್‌ಸಿಲ್ಕ್‌ನಂತಹ ಬ್ರ್ಯಾಂಡ್‌ಗಳನ್ನು ಮುನ್ನಡೆಸಿದ್ದಾರೆ. ಆದ್ದರಿಂದ ಪ್ರಿಯಾ ನಾಯರ್ ಯಾರು, ಅವರ ಶೈಕ್ಷಣಿಕ ಅರ್ಹತೆಗಳೇನು? ಈ ಹುದ್ದೆಯಲ್ಲಿ ಅವರಿಗೆ ಸಿಗುವ ಸಂಬಳ ಎಷ್ಟು? ಎಂಬುದರ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿದುಕೊಳ್ಳೋಣ.
ಪ್ರಿಯಾ ನಾಯರ್ ಯಾರು?
HUL ನ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕಿ ಹುದ್ದೆಯನ್ನು ಅಲಂಕರಿಸಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆ ಪಾತ್ರರಾದ ಪ್ರಿಯಾ ನಾಯರ್ 1995 ರಲ್ಲಿ ಈ FMCG ಕಂಪನಿಯೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು ಮತ್ತು ಹೋಂ ಕೇರ್‌ನ ಕಾರ್ಯನಿರ್ವಾಹಕ ನಿರ್ದೇಶಕಿ, ಬ್ಯೂಟಿ ಆ್ಯಂಡ್ ಸ್ಕೀನ್ ಕೇರ್‌ನ ಕಾರ್ಯನಿರ್ವಾಹಕ ನಿರ್ದೇಶಕಿ ಸೇರಿದಂತೆ ಹಲವಾರು ಹುದ್ದೆಗಳಲ್ಲಿ ಕೆಲಸ ಮಾಡಿದ ಅನುಭವ ಇವರಿಗಿದೆ. ಅವರ ಮೂರು ದಶಕಗಳ ವೃತ್ತಿಜೀವನದಲ್ಲಿ, ಅವರು ಡವ್, ಸನ್‌ಸಿಲ್ಕ್, ರಿನ್ ಮತ್ತು ವ್ಯಾಸಲೀನ್‌ನಂತಹ ಜನಪ್ರಿಯ ಬ್ರ್ಯಾಂಡ್‌ಗಳನ್ನು ಮುನ್ನಡೆಸಿದ್ದಾರೆ.
ಪ್ರಿಯಾ ನಾಯರ್ ವಿದ್ಯಾಭ್ಯಾಸ:
ಪ್ರಿಯಾ ನಾಯರ್ ಹಾರ್ವರ್ಡ್ ಬಿಸಿನೆಸ್ ಸ್ಕೂಲ್‌ನಿಂದ ವ್ಯವಹಾರ ಆಡಳಿತ ಮತ್ತು ನಿರ್ವಹಣೆಯನ್ನು ಅಧ್ಯಯನ ಮಾಡಿದ್ದಾರೆ. 1994 ರಲ್ಲಿ ಪುಣೆ ಮೂಲದ ಸಿಂಬಿಯೋಸಿಸ್ ಇನ್‌ಸ್ಟಿಟ್ಯೂಟ್ ಆಫ್ ಬಿಸಿನೆಸ್ ಮ್ಯಾನೇಜ್‌ಮೆಂಟ್‌ನಿಂದ ವ್ಯವಹಾರ ಆಡಳಿತದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
HUL ಹೊಸ ಸಿಇಒ ಪ್ರಿಯಾ ನಾಯರ್ ಎಷ್ಟು ಸಂಬಳ ಪಡೆಯಲಿದ್ದಾರೆ?
ಪ್ರಿಯಾ ನಾಯರ್ ಅವರು 2025ರ ಆಗಸ್ಟ್ 1 ರಿಂದ 2030 ರ ಜುಲೈ 31 ರವರೆಗೆ ಈ ಹುದ್ದೆಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಕಂಪನಿಯ ಪ್ರಸ್ತುತ ಸಿಇಒ ರೋಹಿತ್ ಜಾವಾ ಅವರು 2025 ರ ಹಣಕಾಸು ವರ್ಷದಲ್ಲಿ ಒಟ್ಟು 23.23 ಕೋಟಿ ರೂ. ಸಂಬಳವನ್ನು ಪಡೆದಿದ್ದಾರೆ, ಇದರಲ್ಲಿ ರೂ. 3.65 ಕೋಟಿ ಸಂಬಳ, ರೂ. 11.45 ಕೋಟಿ ಭತ್ಯೆಗಳು, ರೂ. 3.78 ಕೋಟಿ ಬೋನಸ್ ಮತ್ತು ರೂ. 2.76 ಕೋಟಿ ದೀರ್ಘಾವಧಿ ಪ್ರೋತ್ಸಾಹಕಗಳು ಸೇರಿವೆ. ನಾಯರ್ ಕೂಡ ಇದೇ ರೀತಿ ಸಂಬಳ ಪಡೆಯಲಿದ್ದಾರೆ ಎಂದು ಅಂದಾಜಿಸಲಾಗಿದೆ. ಆದರೆ ಈ ಕುರಿತು ಯಾವುದೇ ರೀತಿಯ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.
