ಆಸ್ತಿ ಕರದ ಬೃಹತ್ ಏರಿಕೆ: ಹುಬ್ಬಳ್ಳಿ-ಧಾರವಾಡದ ಜನರ ಮೇಲೆ ಹಣದ ಹೊರೆ

ಧಾರವಾಡ: ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಸ್ವಂತ ಮನೆಯಲ್ಲಿ ವಾಸಿಸುವವರು ಇದೀಗ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದೇವೆ ಎಂಬಂತೆ ಭಾಸವಾಗುತ್ತಿದೆ. ಇದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯು ಪ್ರಸಕ್ತ ಸಾಲಿನಲ್ಲಿ ಸಂಗ್ರಹಿಸುತ್ತಿರುವ ಆಸ್ತಿ ತೆರಿಗೆ ಕುರಿತಂತೆ ಸಾರ್ವಜನಿಕರು ನೊಂದು ನುಡಿಯುತ್ತಿರುವ ಮಾತಾಗಿದೆ. ಇದಕ್ಕೆ ಕಾರಣ, ಮಹಾನಗರ ಪಾಲಿಕೆ ಏಕಾಏಕಿ ಆಸ್ತಿ ಕರ (Property Tax) ಹೆಚ್ಚಳ ಮಾಡಿರುವುದು.
ಸರ್ಕಾರದ ನಿಯಮದಂತೆ ಆಸ್ತಿ ಕರ ಹೆಚ್ಚಳವಾಗಿದೆ. ಇದರಲ್ಲಿ ಏನು ಮಾಡಲು ಆಗದು ಎಂದು ಪಾಲಿಕೆ ಅಧಿಕಾರಿಗಳು ಹೇಳಿದರೇ, ಆಡಳಿತದಲ್ಲಿರುವ ಬಿಜೆಪಿ ಸದಸ್ಯರೇ ಇದೀಗ ಆಸ್ತಿ ಕರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಈ ನಡುವೆ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯೂ ಇದರ ವಿರುದ್ಧ ಸಭೆ ನಡೆಸಿ, ಮುಂದಿನ 15 ದಿನಗಳವರೆಗೆ ತೆರಿಗೆ ಕಟ್ಟಬೇಡಿ ಅಂತ ಅವಳಿ ನಗರದ ಜನರಿಗೆ ಮನವಿ ಮಾಡಿದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಹೋರಾಟ ನಡೆಸಿ, ಆಡಳಿತಕ್ಕೆ ಚುರುಕು ಮುಟ್ಟಿಸೋಣ ಅಂತ ಹೇಳಿದೆ.
ಆಸ್ತಿಗಳಿಗೆ ಪರಿಷ್ಕೃತ ಎಸ್‌ಆರ್ (ಮಾರುಕಟ್ಟೆ) ದರವನ್ನು ಮೌಲ್ಯಮಾಪನ ಮಾಡಿ, ಅದಕ್ಕೆ ತಕ್ಕಂತೆ ಆಸ್ತಿ ಕರ ವಿಧಿಸಲಾಗುತ್ತದೆ. ಈ ಕೆಲಸ 2019ರಿಂದ ಆಗಬೇಕಿತ್ತು. ಆದರೆ, ಇನ್ನೂವರೆಗೂ ಆಗದಿರುವುದು ಸಮಸ್ಯೆಗೆ ಕಾರಣವಾಗಿದೆ. ಕೆಲ ಪ್ರದೇಶಗಳಲ್ಲಿ ಮಾರುಕಟ್ಟೆ ಬೆಲೆ ದುಪ್ಪಟ್ಟು, ಮೂರು ಪಟ್ಟು ಆಗಿದೆ. ಅದಕ್ಕೆ ತಕ್ಕಂತೆ ಆಯಾ ಆಸ್ತಿಗಳ ತೆರಿಗೆ ಹೆಚ್ಚಿದೆ.