ಜೈಲಲ್ಲೇ ಕೈದಿಗಳಿಗೆ ‘ರಾಜಾತಿಥ್ಯ’: ಮೊಬೈಲ್ ಫೋನ್ ಬಳಸಿ ಸೆಲ್ಫಿ ಸಂಭ್ರಮ!

ಹುಬ್ಬಳ್ಳಿ : ಜಿಲ್ಲೆ ಹುಬ್ಬಳ್ಳಿಯ ಉಪ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಗಳಿಗೆ ರಾಜಾತಿಥ್ಯ ಸಿಗುತ್ತಿರುವ ಆರೋಪ ಕೇಳಿಬಂದಿದ್ದು, ಜೈಲಿನೊಳಗಿನ ಅಕ್ರಮ ಸೌಲಭ್ಯಗಳ ವಿಡಿಯೋ ವೈರಲ್ ಆಗಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಹಣ ಕೊಟ್ಟರೆ ಸಬ್ ಜೈಲಿನಲ್ಲಿ ಎಲ್ಲಾ ಸೌಲಭ್ಯಗಳು ಸಿಗುತ್ತವೆ ಎಂಬ ಆರೋಪಗಳು ಕೇಳಿಬಂದಿದ್ದು, ಸಾರ್ವಜನಿಕ ವಲಯದಲ್ಲಿ ಆತಂಕಕ್ಕೆ ಕಾರಣವಾಗಿವೆ. ವೈರಲ್ ಆಗಿರುವ ವಿಡಿಯೋದಲ್ಲಿ ವಿಚಾರಣಾಧೀನ ಕೈದಿಗಳು ಮೊಬೈಲ್ ಫೋನ್ ಬಳಸುತ್ತಿರುವುದು, ಸೆಲ್ಫಿ ತೆಗೆದುಕೊಳ್ಳುತ್ತಿರುವುದು, ಗಾಂಜಾ ಹಾಗೂ ಮದ್ಯ ಸೇವನೆ ಮಾಡುತ್ತಿರುವುದು ಕಾಣಿಸುತ್ತಿದೆ. ಜೈಲಿನಲ್ಲೇ ಬಿಂದಾಸ್ ಜೀವನ ನಡೆಸುತ್ತಿರುವಂತೆ ಕಂಡುಬರುವ ಈ ದೃಶ್ಯಗಳು ಕಾನೂನು ಸುವ್ಯವಸ್ಥೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿವೆ. ಜೈಲಿನೊಳಗೆ ಯಾವುದೇ ಅಂಜಿಕೆ ಇಲ್ಲದೇ ಕೈದಿಗಳು ವರ್ತಿಸುತ್ತಿರುವುದು ಆಡಳಿತದ ಮೇಲಿನ ಅನುಮಾನಗಳನ್ನು ಮತ್ತಷ್ಟು ಗಾಢಗೊಳಿಸಿದೆ.

ಈ ಉಪ ಕಾರಾಗೃಹದಲ್ಲಿ ಕಳೆದ ವರ್ಷ ನವೆಂಬರ್ 13ರಂದು ನಡೆದಿದ್ದ ಮಲ್ಲಿಕ್ ಕೊಲೆ ಪ್ರಕರಣದ ಆರೋಪಿಗಳು ಸೇರಿದಂತೆ ಅನೇಕ ಗಂಭೀರ ಪ್ರಕರಣಗಳಲ್ಲಿ ಶಾಮೀಲಾದ ಆರೋಪಿಗಳು ಇದ್ದಾರೆ. ಬೆಂಡಿಗೇರಿ ಠಾಣೆ ಪೊಲೀಸರು ಈ ಪ್ರಕರಣ ಸಂಬಂಧ 17 ಜನರನ್ನು ಬಂಧಿಸಿದ್ದರು. ವೈರಲ್ ವಿಡಿಯೋದಲ್ಲಿ ಅಭಿಷೇಕ್ ಜಾಧವ್, ಗಣೇಶ್ ಜಾಧವ್ ಸೇರಿದಂತೆ ಕೆಲ ಆರೋಪಿಗಳು ಕಾಣಿಸಿಕೊಂಡಿರುವುದಾಗಿ ಹೇಳಲಾಗುತ್ತಿದೆ