ಹುಬ್ಬಳ್ಳಿ-ಬೆಳಗಾವಿ ವಿಮಾನ ನಿಲ್ದಾಣಗಳ ಕಡೆಗಣನೆ: ಕೇಂದ್ರದ ವಿರುದ್ಧ ಸಚಿವ ಎಂ.ಬಿ. ಪಾಟೀಲ್ ಆಕ್ರೋಶ

ಬೆಂಗಳೂರು: ‘ತಮಿಳುನಾಡಿನ ಮಧುರೈ ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ನಿಲ್ದಾಣವಾಗಿ ಘೋಷಿಸಿರುವ ಕೇಂದ್ರ ಸರಕಾರವು ಕರ್ನಾಟಕ ರಾಜ್ಯದ ಹುಬ್ಬಳ್ಳಿ, ಬೆಳಗಾವಿ ವಿಮಾನ ನಿಲ್ದಾಣಗಳ ಬಗ್ಗೆ ಇಂತಹ ನಿರ್ಧಾರ ಘೋಷಿಸದೆ ಇರುವುದು ತಾರತಮ್ಯ ಧೋರಣೆ ಪ್ರದರ್ಶನ. ಇದು ಸರಿಯಲ್ಲ. ಅವರಿಗೆ ಬೆಣ್ಣೆ, ನಮಗೆ ಸುಣ್ಣ ಎಂದರೆ ಹೇಗೆ?’ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್ ಪ್ರಶ್ನಿಸಿದ್ದಾರೆ.
ಬುಧವಾರ ನಗರದಲ್ಲಿ ಮಾತನಾಡಿರುವ ಅವರು, ಕೇಂದ್ರದ ಮೋದಿ ನೇತೃತ್ವದ ಬಿಜೆಪಿ ಸರಕಾರವು ಹತ್ತಿರದಲ್ಲೇ ಇರುವ ತಮಿಳುನಾಡು ರಾಜ್ಯದ ಚುನಾವಣೆಯ ಮೇಲೆ ಕಣ್ಣಿಟ್ಟುಕೊಂಡು ಹೀಗೆ ಮಾಡಿರಬಹುದು. ಆದರೆ, ನಮ್ಮ ರಾಜ್ಯದ ಬೇಡಿಕೆ ಬಗ್ಗೆ ಕೇಂದ್ರದ ಉದಾಸೀನ ಮನೋಭಾವ ಪ್ರದರ್ಶಿಸಿರುವುದು ಪ್ರಶ್ನಾರ್ಹ ಎಂದು ಆಕ್ಷೇಪಿಸಿದರು.

ಹುಬ್ಬಳ್ಳಿ ಮತ್ತು ಬೆಳಗಾವಿ ವಿಮಾನ ನಿಲ್ದಾಣಗಳನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಿಸಬೇಕು. ಇದರಿಂದ ಉತ್ತರ ಕರ್ನಾಟಕ ಭಾಗಕ್ಕೆ ಅನುಕೂಲ ಆಗುತ್ತದೆ ಎಂದು ಕಳೆದ ವರ್ಷ (2025ರ ಜೂನ್ 24ರಂದು) ಕೇಂದ್ರ ವಿಮಾನಯಾನ ಸಚಿವ ರಾಮಮೋಹನ್ ನಾಯ್ಡುಗೆ ಪತ್ರ ಬರೆಯಲಾಗಿತ್ತು. ಈಗ ನೋಡಿದರೆ ಹೀಗಾಗಿದೆ. ಕೇಂದ್ರ ಸಚಿವ ಜೋಶಿ, ಸಂಸದರಾದ ಶೆಟ್ಟರ್ ಮತ್ತು ಬಸವರಾಜ ಬೊಮ್ಮಾಯಿ ಇದೀಗ ಧ್ವನಿ ಎತ್ತಿ, ರಾಜ್ಯದ ಹಿತಾಸಕ್ತಿಯ ಪರ ನಿಲ್ಲಬೇಕು ಎಂದು ಅವರು ಆಗ್ರಹಿಸಿದರು.
ಹುಬ್ಬಳ್ಳಿ ಮತ್ತು ಬೆಳಗಾವಿ ವಿಮಾನ ನಿಲ್ದಾಣ ಎರಡರ ಪೈಕಿ ಒಂದನ್ನಾದರೂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಘೋಷಿಸಬೇಕು. ಎರಡನ್ನೂ ಉನ್ನತೀಕರಿಸಿದರೆ ಅದು ಇನ್ನೂ ಸ್ವಾಗತಾರ್ಹ. ರಾಜ್ಯದ ಅಗತ್ಯವನ್ನು ಕೇಂದ್ರ ಸರಕಾರ ಮನಗಾಣಬೇಕು. ಇದರಿಂದ ರಾಜ್ಯಕ್ಕೆ ಅನುಕೂಲವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.