ಉಡುಪಿಯ ಯುವಕನಿಗೆ 14 ಲಕ್ಷ ಮೌಲ್ಯದ ಹೀರೋ ಬೈಕ್ ಉಚಿತವಾಗಿ ಸಿಕ್ಕಿದ್ದು ಹೇಗೆ?

ಉಡುಪಿ:ಇಷ್ಟದ ಬೈಕ್ ಖರೀದಿಸಬೇಕು ಅನ್ನೋದು ಈಗಿನ ಜನರೇಷನ್ ಹುಡುಗರ ದೊಡ್ಡ ಕನಸು. ಕೆಲ ಯುವಕರಿಗೆ ಮನೆಯಲ್ಲಿ ತಂದೆ ಅಥವಾ ತಾಯಿ ಬೈಕ್ ಗಿಫ್ಟ್ ಮಾಡ್ತಾರೆ. ಇನ್ನು ಬಡ ಹುಡುಗರು ಹಗಲು ರಾತ್ರಿ ಕಷ್ಟಪಟ್ಟು ದುಡಿದು ತನ್ನಿಷ್ಟದ ಬೈಕ್ ಮೇಲೆ ಕೂರುತ್ತಾರೆ. ಇನ್ನೂ ಕೆಲವರಿಗೆ ಇದು ಕನಸಾಗಿಯೇ ಉಳಿದಿರುತ್ತೆ.

ಆದರೆ ಕರ್ನಾಟಕದ ಯುವಕನಿಗೆ ಬರೋಬ್ಬರಿ 14 ಲಕ್ಷ ಬೆಲೆ ಬಾಳುವ ಸೂಪರ್ ಬೈಕ್ ಅನ್ನು ಹೀರೋ ಕಂಪನಿ ಉಚಿತವಾಗಿ ನೀಡಿದೆ. ಇಷ್ಟಕ್ಕೂ ಆ ಯುವಕ ಮಾಡಿದ್ದೇನು ಗೊತ್ತಾ?
ಈಗೆಲ್ಲ ಬೈಕ್ ರೈಡಿಂಗ್, ಬೈಕ್ ಟೂರಿಂಗ್ ಅನ್ನೋದು ಹವ್ಯಾಸವಾಗಿದೆ. ರಜೆ ಸಿಕ್ಕರೆ ಸಾಕು ಬೈಕಲ್ಲಿ ಎಲ್ಲಾದ್ರೂ ಲಾಂಗ್ ರೈಡ್ ಹೋಗೋಣ ಅಂತಾರೆ ಈಗಿನ ಯುವಕ-ಯುವತಿಯರು. ಈ ಕಾರಣದಿಂದಲೇ ಬೈಕ್ ಕಂಪನಿಗಳು ಕೂಡ ಲೆಕ್ಕವಿಲ್ಲದಷ್ಟು ಹೊಸ ಹೊಸ ಬೈಕ್‌ಗಳನ್ನ ಮಾರುಕಟ್ಟೆಗೆ ಲಾಂಚ್ ಮಾಡುತ್ತಲೇ ಇದೆ. ಆದರೆ ಕೆಲವರು ಇರುವ ಬೈಕ್‌ನಲ್ಲೇ ತಮ್ಮ ಕನಸುಗಳನ್ನ ನನಸು ಮಾಡಿಕೊಳ್ಳುತ್ತಿದ್ದಾರೆ. ಈ ಪೈಕಿ ಉಡುಪಿ ಮೂಲದ ಪ್ರಜ್ವಲ್ ಶೆಣೈ ಕೂಡ ಒಬ್ಬರು.

ಹೌದು, ಪ್ರಜ್ವಲ್ ತನ್ನ 25 ವರ್ಷದ ಹಳೆಯ ಹೀರೋ ಹೊಂಡಾ ಸ್ಪ್ಲೆಂಡರ್ ಬೈಕ್‌ನಲ್ಲೇ ದೇಶ ಸುತ್ತಿದ್ದರು. ಉಡುಪಿಯ ಶಿರ್ವದ ಪ್ರಜ್ವಲ್ ಶೆಣೈ ತನ್ನ ತಂದೆಯೊಂದಿಗೆ ಹಳೆಯ ಬೈಕ್‌ನಲ್ಲೇ ಅಯೋಧ್ಯೆಯ ಶ್ರೀರಾಮ ಮಂದಿರದವರೆಗೆ ಸವಾರಿ ಮಾಡಿದ್ದರು. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗಿನ ಪ್ರವಾಸಗಳು ಸೇರಿದಂತೆ ಒಂದೇ ಬೈಕ್‌ನಲ್ಲಿ ಭಾರತದಾದ್ಯಂತ 50,000 ಕಿಲೋಮೀಟರ್‌ಗಳಿಂತ ಹೆಚ್ಚು ದೂರ ಪ್ರಯಾಣಿಸಿ ಗಮನ ಸೆಳೆದಿದ್ದರು.
ಈ ಪ್ರಯಾಣದಲ್ಲಿ ತಂದೆ-ಮಗ ಜೋಡಿ ಕೇವಲ ಒಂಬತ್ತು ದಿನಗಳಲ್ಲಿ 4,000 ಕಿ.ಮೀ.ಗಳಿಗೂ ಹೆಚ್ಚು ದೂರ ಕ್ರಮಿಸಿ ಅಯೋಧ್ಯೆ ತಲುಪುವ ಮುನ್ನ ಮಹಾಕುಂಭಮೇಳಕ್ಕಾಗಿ ಪ್ರಯಾಗ್‌ರಾಜ್‌ಗೆ ಭೇಟಿ ನೀಡಿದ್ದರು. ಪ್ರಜ್ವಲ್ ಅವರ ಕಾಶ್ಮೀರ, ತಿರುಪತಿ, ಮಧುರೈ, ಕನ್ಯಾಕುಮಾರಿ, ಗೋವಾ, ಪುರಿ, ಶಿರಡಿ, ನಾಸಿಕ್ ಮತ್ತು ಪಂಢರಪುರಗಳಿಗೆ ಬೈಕ್ ರೈಡ್ ಮಾಡಿರುವುದನ್ನು ಗುರುತಿಸಿದ ಹೀರೋ ಮೋಟೋಕಾರ್ಪ್ ಸಂಸ್ಥೆ ಅವರಿಗೆ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಸ್ಪೆಷಲ್ ಎಡಿಷನ್ ಬೈಕ್ ಅನ್ನು ಉಚಿತವಾಗಿ ನೀಡಿ ತಮ್ಮ ಅತ್ಯುತ್ತಮ ಗ್ರಾಹಕ ಎಂಬ ಪ್ರಶಸ್ತಿ ನೀಡಿದೆ.

ಹೀರೋ ಸೆಂಟೆನಿಯಲ್ ವಿಶೇಷತೆಯೇನು?
ಹೀರೋ ಮೋಟೋಕಾರ್ಪ್ ಸಂಸ್ಥೆಯು ಪ್ರಜ್ವಲ್‌ಗೆ ಹೊಚ್ಚ ಹೊಸ ಹೀರೋ ಸೆಂಟೆನಿಯಲ್ ಸ್ಪೆಷಲ್ ಎಡಿಷನ್ ಬೈಕ್ ಅನ್ನು ಉಡುಗೊರೆಯಾಗಿ ನೀಡುವ ಮೂಲಕ ಅವರನ್ನು ಗೌರವಿಸಿದೆ. ಹೀರೋ ಮೋಟೋಕಾರ್ಪ್ ಸಂಸ್ಥಾಪಕ ಡಾ.ಬ್ರಿಜ್‌ಮೋಹನ್ ಲಾಲ್ ಮುಂಜಾಲ್ ಅವರ 101ನೇ ಜನ್ಮ ದಿನಾಚರಣೆಯ ಸ್ಮರಣಾರ್ಥ ಸೆಂಟೆನಿಯಲ್ ಎಡಿಷನ್ ಬೈಕ್ ಹೊರತರಲಾಗಿದೆ. ಭಾರತದಲ್ಲಿ ಕೇವಲ 100 ಬೈಕ್‌ಗಳು ಮಾತ್ರವೇ ಲಭ್ಯವಿದ್ದು, ಇದರಲ್ಲಿ ಒಂದು ಉಚಿತವಾಗಿ ಪ್ರಜ್ವಲ್‌ಗೆ ವಿತರಿಸಲಾಗಿದೆ. ಇದರ ಮಾರುಕಟ್ಟೆ ಮೌಲ್ಯ ಸುಮಾರು 14 ಲಕ್ಷ ರೂಪಾಯಿ ಎನ್ನಲಾಗಿದೆ. ಹೊಸ ಬೈಕ್ ಅನ್ನು ಕಂಡು ಪ್ರಜ್ವಲ್ ಭಾವುಕರಾಗಿದ್ದು, ಉಡುಪಿಯಲ್ಲಿ ಶಕ್ತಿ ಶೋರೂಂ ಕೇಕ್ ಕಟ್ ಮಾಡಿಸಿ ಬೈಕ್ ಹಸ್ತಾಂತರಿಸಿದೆ.