ನೀರಿಲ್ಲದೆ ಬಿತ್ತನೆ ಹೇಗೆ? ಸಿಂಧೂ ಒಪ್ಪಂದ ರದ್ದಿನಿಂದ ಪಾಕಿಸ್ತಾನದಲ್ಲಿ ಕೃಷಿ ಸಂಕಟ

ಇಸ್ಲಾಮಾಬಾದ್: ಗಡಿಯಾಚೆಗಿನ ಭಯೋತ್ಪಾದನೆ ವಿರುದ್ಧ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಲು ಭಾರತ ಹಲವಾರು ಕ್ರಮಗಳನ್ನು ಕೈಗೊಂಡಿತ್ತು. ಅದರಲ್ಲಿ ಸಿಂಧೂ ಜಲ ಒಪ್ಪಂದ ಕೂಡ ಒಂದು. ಈ ಒಪ್ಪಂದ ರದ್ದು ಮಾಡಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನಕ್ಕೆ ಹೋಗುತ್ತಿದ್ದ ನೀರನ್ನು ಭಾರತದಲ್ಲಿ ತಡೆ ಹಿಡಿಯಲಾಗಿದೆ. ಇದರ ಪರಿಣಾಮ ಪಾಕಿಸ್ತಾನದಿಂದ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಇಷ್ಟೇ ಅಲ್ಲದೆ, ಬೆಳೆಗಳು ಕೂಡ ಅಪಾಯದಲ್ಲಿವೆ.

ಈಗಾಗಲೇ ದೇಶ ದೇಶಗಳಲ್ಲಿ ಭಿಕ್ಷಾಟನೆ ಮಾಡಿ ಬದುಕು ಸಾಗಿಸುತ್ತಿರುವ ಪಾಕಿಸ್ತಾನದಲ್ಲಿ ಬಿತ್ತನೆ ಕಾಲ ಬಂದಾಗ ಪರಿಸ್ಥಿತಿ ತೀರಾ ಕೆಟ್ಟದಾಗಿರಲಿದೆ. ಭಾರತ ಸಿಂಧೂ ನದಿ ನೀರು ಒಪ್ಪಂದ ಸ್ಥಗಿತಗೊಳಿಸಿದ ನಂತರ ಪಾಕಿಸ್ತಾನದ ಪರಿಸ್ಥಿತಿ ಹದಗೆಟ್ಟಿದೆ. ದೇಶದ ಅನೇಕ ದೊಡ್ಡ ಅಣೆಕಟ್ಟುಗಳು ಬತ್ತಿ ಹೋಗುವ ಅಂಚಿಗೆ ತಲುಪಿವೆ.
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಬಳಿಕ, ಭಾರತವು ಸಿಂಧೂ ನದಿ ಜಲ ಒಪ್ಪಂದವನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಗೊಳಿಸಿದೆ. ಗಡಿಯಾಚೆಗಿನ ಭಯೋತ್ಪಾದನೆಯ ಬಗ್ಗೆ ಪಾಕಿಸ್ತಾನಕ್ಕೆ ಕಠಿಣ ಎಚ್ಚರಿಕೆ ನೀಡಿತ್ತು. ರಕ್ತ ಮತ್ತು ನೀರು ಒಟ್ಟಿಗೆ ಹರಿಯಲು ಸಾಧ್ಯವಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದರು.
ತಜ್ಞರ ಪ್ರಕಾರ, ಖಾರಿಫ್ ಬೆಳೆ ಬಿತ್ತನೆ ಅವಧಿಯಲ್ಲಿ ನೀರಿನ ಕೊರತೆಯು ಪಾಕಿಸ್ತಾನದ ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ದೇಶದ ಎರಡು ಪ್ರಮುಖ ಅಣೆಕಟ್ಟುಗಳಾದ ಝೀಲಂ ನದಿಯ ಮಂಗಳ ಅಣೆಕಟ್ಟು ಮತ್ತು ತರ್ಬೇಲಾ ಅಣೆಕಟ್ಟುಗಳಲ್ಲಿ ನೀರಿನ ಮಟ್ಟದಲ್ಲಿ ತೀವ್ರ ಕುಸಿತ ಕಂಡುಬಂದಿದೆ. ಇದಲ್ಲದೆ, ಭಾರತವು ಚೆನಾಬ್ ನದಿಯ ನೀರಿನ ಹರಿವನ್ನು ಕಡಿಮೆ ಮಾಡಿರುವುದರಿಂದ ತೊಂದರೆ ಹೆಚ್ಚಿದೆ.
ನೀರಿಲ್ಲದೆ ಬಿತ್ತನೆ ಹೇಗೆ? ಪಾಕಿಸ್ತಾನದ ಪಂಜಾಬ್ ಮತ್ತು ಸಿಂಧ್ ಪ್ರಾಂತ್ಯಗಳಲ್ಲಿ ನೀರಾವರಿ ಹಾಗೂ ವಿದ್ಯುತ್ ಉತ್ಪಾದನೆಗೆ ಮಂಗಳ ಮತ್ತು ತರ್ಬೆಲಾ ಅಣೆಕಟ್ಟುಗಳ ನೀರು ನಿರ್ಣಾಯಕವಾಗಿವೆ ಎಂದು ಪಾಕಿಸ್ತಾನದ ಸಿಂಧೂ ನದಿ ವ್ಯವಸ್ಥೆ ಪ್ರಾಧಿಕಾರ ಹೇಳಿದೆ. ಈ ಕುರಿತು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಅವುಗಳ ಸಂಗ್ರಹವು ಸುಮಾರು ಶೇ.50ರಷ್ಟು ಕಡಿಮೆಯಾಗಿದೆ. ಪರಿಸ್ಥಿತಿ ಎಷ್ಟು ಗಂಭೀರವಾಗಿದೆ ಎಂದರೆ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರೇ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ನೀರಿನ ಸಮಸ್ಯೆಯನ್ನು ಎತ್ತುತ್ತಿದ್ದಾರೆ. ಈ ವಿಷಯದ ಬಗ್ಗೆ ಮಾತುಕತೆ ನಡೆಸುವಂತೆ ಶೆಹಬಾಜ್ ಹಲವಾರು ಬಾರಿ ಮನವಿ ಮಾಡಿದ್ದಾರೆ. ಭಯೋತ್ಪಾದನೆ ಮತ್ತು ಪಿಒಕೆ ವಿಷಯಗಳನ್ನು ಮಾತ್ರ ಪಾಕಿಸ್ತಾನದೊಂದಿಗೆ ಚರ್ಚಿಸಲಾಗುವುದು ಎಂದು ಭಾರತ ಸ್ಪಷ್ಟವಾಗಿ ಹೇಳಿದೆ.
