ಹುಕ್ಕಾ ನಿಷೇಧ ಧಿಕ್ಕರಿಸಿ ಮಂತ್ರಾಲಯದ ಹೊರಗೆ ವೀಡಿಯೋ ಮಾಡಿದ ಹೋಟೆಲ್ ಮಾಲೀಕ: ವೈರಲ್ ವಿಡಿಯೋಗೆ ವ್ಯಾಪಕ ಆಕ್ರೋಶ!

ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನಾವೀಸ್ ಸಾರ್ವಜನಿಕ ಪ್ರದೇಶಗಳಲ್ಲಿ ಹುಕ್ಕಾ ಸೇದುವುದನ್ನು ನಿಷೇಧಿಸಿದ್ರೂ ಮುಂಬೈನ ಹೋಟೆಲ್ ಮಾಲೀಕನೊಬ್ಬ ತನ್ನ ಐಷಾರಾಮಿ ಕಾರಿನಲ್ಲಿ ಕೂತು ರಾಜ್ಯದ ಪ್ರಧಾನ ಕಚೇರಿ ಮಂತ್ರಾಲಯದ ಹೊರಗಡೆ ಹುಕ್ಕಾ ಸೇದುತ್ತಿರುವ ವಿಡಿಯೋ ಚಿತ್ರೀಕರಿಸಿ ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಾಕಿಕೊಂಡಿದ್ದಾರೆ.

ಇದೀಗ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದೆ.
ಮಹಮ್ಮದ್ ಠಕ್ಕರ್ ಎಂಬ ವ್ಯಕ್ತಿ ಮುಂಬೈನ ಫಾಹಮ್ ಲೌಂಜ್ ಮಾಲೀಕ. ಈತ ಮಂತ್ರಾಲಯದ ಆವರಣದಲ್ಲಿ ತಮ್ಮ ರೇಂಜರ್ ರೋವರ್ ಕಾರಿನಲ್ಲಿ ಚಲಿಸುತ್ತಾ ವಿಡಿಯೋ ಮಾಡಿದ್ದು, ಹುಕ್ಕಾ ಇದೊಂದು ಸೊಪ್ಪು. ಆದರೆ, ಸಾರ್ವಜನಿಕ ಸ್ಥಳಗಳಲ್ಲಿ ಈ ವಸ್ತುವನ್ನು ನಿಷೇಧಿಸಲಾಗಿದೆ. ನಿಮ್ಮಲ್ಲಿ ಯಾರಿಗಾರದರೂ ಹುಕ್ಕಾ ಸೇದುವ ಬಯಕೆ ಇದ್ದರೆ, ನನ್ನ ಕಾರಿನಲ್ಲಿ ಬಂದು ಕುಳಿತುಕೊಳ್ಳಬಹುದು ಎಂದು ಆಹ್ವಾನಿಸಿದ್ದಾರೆ. ಅಂದಹಾಗೆ ಕಾರಿನಲ್ಲಿ ಫಾಹಮ್ ಲೌಂಜ್ನ ಸಿಬ್ಬಂದಿ ಕೂಡ ಇದ್ದರು ಎಂದು ತಿಳಿಸಲಾಗಿದೆ. ಅದೇ ರೀತಿ ಮಹಮ್ಮದ್ ತಮ್ಮ ರೆಸ್ಟೋರೆಂಟ್ಗೆ ಬಂದವರಿಗೆ ಹುಕ್ಕಾ ನೀಡುತ್ತೇವೆ ಎಂದು ತಿಳಿಸಿದ್ದಾರೆ.
ಹುಕ್ಕಾ ಪಾರ್ಲರ್ಗಳ ವಿರುದ್ಧ ಸಿಎಂ ಫಡ್ನವೀಸ್ ಕಠಿಣ ಕ್ರಮ
ಅಂದಹಾಗೆ ಮುಖ್ಯಮಂತ್ರಿ ದೇವೇಂದ್ರ ಫಡ್ನಾವೀಸ್ ಹುಕ್ಕಾ ಪಾರ್ಲರ್ಗಳ ವಿರುದ್ಧ ಕಠಿಣಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ ಕೆಲವೇ ತಿಂಗಳಲ್ಲಿ ಈ ವಿಡಿಯೋ ವೈರಲ್ ಆಗಿದೆ. ಇದೇ ವರ್ಷದ ಮಾರ್ಚ್ ತಿಂಗಳಲ್ಲಿ ರಾಜ್ಯ ವಿಧಾನಸಭಾ ಅಧಿವೇಶನದಲ್ಲಿ ಮುಖ್ಯಮಂತ್ರಿ ಫಡ್ನಾವೀಸ್ ಮಾತನಾಡಿ, ಹುಕ್ಕಾ ಪಾರ್ಲರ್ಗಳನ್ನು ನಿಷೇಧಿಸುವ ಕಾನೂನನ್ನು ಇನ್ನಷ್ಟು ಬಲಗೊಳಿಸಲಾಗುವುದು. ಈ ನಿಯಮಗಳನ್ನು ಉಲ್ಲಂಘಿಸಿದ ರೆಸ್ಟೋರೆಂಟ್ಗಳ ಪರವಾನಗಿಯನ್ನು ರದ್ದುಗೊಳಿಸಲಾಗುವುದು ಹಾಗೂ ಕಾನೂನು ಜಾರಿ ಸಂಸ್ಥೆಗಳನ್ನು ಹೊರತುಪಡಿಸಿ ಬೇರೆ ಯಾರಾದರೂ ಅಂತಹ ಚಟುವಟಿಕೆಗಳನ್ನು ಪತ್ತೆಹಚ್ಚಿದರೆ ಆ ಪ್ರದೇಶದ ಪೊಲೀಸ್ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
