ಆಸ್ಪತ್ರೆ ನರ್ಸ್ ಎಡವಟ್ಟು: 6 ತಿಂಗಳ ಮಗುವಿನ ಕಿರುಬೆರಳು ಕತ್ತರಿಸಿದ ಸಿಬ್ಬಂದಿ!

ಬೆಂಗಳೂರು: ಅನಾರೋಗ್ಯದ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದ 6 ತಿಂಗಳ ಮಗುವಿನ ಬೆರಳನ್ನೇ ನರ್ಸ್ ಕತ್ತರಿಸಿರುವ ಘಟನೆ ಬೆಂಗಳೂರಿನ ಇಂದಿರಾ ನಗರದಲ್ಲಿ ನಡೆದಿದೆ. ಜ್ವರ ಮತ್ತು ಕಫದ ಹಿನ್ನೆಲೆ ಚಿನ್ಮಯ್ ಮಿಷನ್ ಆಸ್ಪತ್ರೆಗೆ ಮಗುವನ್ನು ಪೋಷಕರು ಫೇಬ್ರವರಿ 19ರಂದು ದಾಖಲಿಸಿದ್ದರು. ಅಲ್ಲಿಂದ ಫೆ.24ರ ವರೆಗೆ ಮಗುವಿಗೆ ನಿರಂತರ ಚಿಕಿತ್ಸೆ ನೀಡಲಾಗಿತ್ತು. ಆದರೆ ನಿನ್ನೆ ಡ್ರಿಪ್ಸ್ಗೆ ಹಾಕಿದ್ದ ಡ್ರೆಸ್ಸಿಂಗ್ ತೆಗೆಯುವ ಸಂದರ್ಭ ನಿರ್ಲಕ್ಷದ ಕಾರಣದಿಂದ ನರ್ಸ್ ಮಗುವಿನ ಎಡಗೈ ಕಿರುಬೆರೆಳಿನ ಅರ್ಧ ಬಾಗವನ್ನೇ ಕತ್ತರಿಸಿದ್ದಾರೆ. ಗಂಭೀರ ಗಾಯದಿಂದ ಎಳೆಯ ಕಂದಮ್ಮ ನರಳಾಡುತ್ತಿದ್ದು, ಈ ಬಗ್ಗೆ ಪೊಲೀಸ್ ದೂರು ದಾಖಲಾಗಿದೆ.


ದೂರಿನಲ್ಲಿ ಏನಿದೆ?
6 ತಿಂಗಳ ತಮ್ಮ ಗಂಡು ಮಗು ಜ್ವರ ಮತ್ತು ಶೀತದಿಂದ ಬಳಲುತ್ತಿದ್ದ ಹಿನ್ನೆಲೆ ಇಂದಿರಾನಗರದಲ್ಲಿರುವ ಚಿನ್ಮಯ ಮಿಷನ್ ಆಸ್ಪತ್ರೆಗೆ ಆತನನ್ನು ಕರೆತಂದು ವೈದ್ಯರನ್ನು ಸಂಪರ್ಕಿಸಿದ್ದೆವು. ಮಗುವಿಗೆ ತೀವ್ರ ಅನಾರೋಗ್ಯದ ಹಿನ್ನೆಲೆ ಹೆಚ್ಚಿನ ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಿಸಲು ಅವರು ಸೂಚಿಸಿದ್ದರು. 5-6 ದಿನಗಳ ಚಿಕಿತ್ಸೆ ಬಳಿಕ ಫೆಬ್ರವರಿ 24ರಂದು ಮಗುವಿನ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದ ಹಿನ್ನೆಲೆ ಡಿಸ್ಚಾರ್ಜ್ಗೆ ನಿರ್ಧರಿಸಲಾಗಿತ್ತು. ನಾವು ಬಿಲ್ಲಿಂಗ್ ಕೌಂಟರ್ಗೆ ಹಣ ಪಾವತಿ ಮಾಡಲು ಹೋಗಿದ್ದ ಸಂದರ್ಭ, ನರ್ಸ್ ನಿರ್ಲಕ್ಷ್ಯಕ್ಕೆ ಮಗುವಿನ ಎಡಗೈ ಕಿರು ಬೆರಳು ಕಟ್ ಆಗಿದೆ. ಹೀಗಾಗಿ ವೈದ್ಯರು, ಸಿಬ್ಬಂದಿ ಮತ್ತು ಆಸ್ಪತ್ರೆಯ ಆಡಳಿತ ಮಂಡಳಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮಗುವಿನ ತಂದೆ ವಿಜಯ್ ಕುಮಾರ್ ಆಗ್ರಹಿಸಿದ್ದಾರೆ.
ಸತ್ಯ ಮರೆಮಾಚಲು ಯತ್ನ?
ಘಟನೆ ಬಳಿಕ ತುರ್ತು ಚಿಕಿತ್ಸಾ ಘಟಕಕ್ಕೆ ಮಗುವನ್ನು ಕರೆದುಕೊಂಡು ಹೋಗಲಾಗಿದ್ದು, ಗಾಯಕ್ಕೆ ಡ್ರೆಸ್ಸಿಂಗ್ ಮಾಡಲಾಗಿದೆ. ಹೀಗಿದ್ದರೂ ಯಾವುದೇ ದೊಡ್ಡ ಗಾಯವಾಗಿಲ್ಲ. ಮಗು ಚಿಕ್ಕದಾಗಿರುವ ಕಾರಣ ಗಾಯ ಅದಾಗೇ ಗುಣವಾಗುತ್ತದೆ ಎಂದು ತಿಳಿಸಿದ್ದಾರೆ. ಆದರೆ ಘಟನೆಯಲ್ಲಿ ಮಗುವಿನ ಅರ್ಧ ಬೆರಳು ಕಟ್ ಆಗಿದೆ ಎಂದು ವಿಜಯ್ ಕುಮಾರ್ ದೂರಿದ್ದಾರೆ.