ಹೆದ್ದಾರಿ 52ರಲ್ಲಿ ರಣಭೀಕರ ಅಪಘಾತ: ಸೀ ಬರ್ಡ್, ಗಣೇಶ್ ಬಸ್ ಮತ್ತು ಲಾರಿ ನಡುವೆ ಡಿಕ್ಕಿ

ಅಂಕೋಲಾ: ಹಂಪಿಯಿಂದ ಗೋವಾ ಕಡೆ ತೆರಳುತ್ತಿದ್ದ ಸೀ ಬರ್ಡ್ ಬಸ್, ಹುಬ್ಬಳ್ಳಿ ಮೂಲಕ ಮಂಗಳೂರು ಕಡೆ ಹೋಗುತ್ತಿದ್ದ ಗಣೇಶ್ ಬಸ್ ಮತ್ತು ಅಂಕೋಲಾ ಕಡೆಯಿಂದ ಯಲ್ಲಾಪುರ ಕಡೆ ಚಲಿಸುತ್ತಿದ್ದ ಲಾರಿ ನಡುವೆ ರಾಷ್ಟ್ರೀಯ ಹೆದ್ದಾರಿ 52ರಲ್ಲಿ ಭೀಕರ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಎಂಟು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ, ಹಾಗೂ 24 ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಘಟನೆ ಅಂಕೋಲಾ ತಾಲ್ಲೂಕಿನ ಸುಂಕಸಾಳ ಮೂಲೆಮನೆ ಪ್ರದೇಶದಲ್ಲಿ ಸಂಭವಿಸಿದೆ.


ಘಟನೆ ಪರಿಣಾಮ, ಎರಡು ಬಸ್‌ಗಳು ಮತ್ತು ಲಾರಿ ಮುಂಬಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, 12 ಮಂದಿ ವಿದೇಶಿಯರು ಕೂಡ ಗಾಯಗೊಂಡಿದ್ದಾರೆ. ಗಂಭೀರವಾಗಿ ಗಾಯಗೊಂಡವರನ್ನು ಕಾರವಾರದ ಕ್ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನುಳಿದ 24 ಗಾಯಾಳುಗಳು ಅಂಕೋಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಅಪಘಾತದಿಂದ ರಾಷ್ಟ್ರೀಯ ಹೆದ್ದಾರಿ 52ರಲ್ಲಿ ಕಿಲೋಮೀಟರ್‌ಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಗಿದೆ.
ಅರಬೈಲ್ ಘಟ್ಟದಲ್ಲಿಯೂ ಸುಮಾರು ಐದು ಗಂಟೆಗಳ ಕಾಲ ವಾಹನಗಳು ಸಾಲುಗಟ್ಟಿನಿಂತಿವೆ. ಘಟನಾ ಸ್ಥಳಕ್ಕೆ ಅಂಕೋಲಾ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ವಾಹನ ತೆರವು ಕಾರ್ಯಾಚರಣೆ ಮೂಲಕ ಸಂಚಾರವನ್ನು ಸುಗಮಗೊಳಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಅಪಘಾತ ಸಂಬಂಧಿ ಪ್ರಕರಣ ದಾಖಲಾಗಿದೆ.