ಬಿಸಿಲಿನ ನಡುವೆಯೂ ನೀರಿನ ಆಶ್ವಾಸನೆ: ತುಂಬೆ ಡ್ಯಾಂನಲ್ಲಿ 6 ಮೀ. ನೀರಿನ ಮಟ್ಟ

ಮಂಗಳೂರು: ಜಿಲ್ಲೆಯ ಕೆಲವೆಡೆ ಆಗೊಮ್ಮೆ-ಈಗೊಮ್ಮೆ ಉತ್ತಮ ಮಳೆಯಾಗುತ್ತಿರುವ ಕಾರಣದಿಂದ ಮಂಗಳೂರಿಗೆ ನೀರುಣಿಸುವ ತುಂಬೆ ವೆಂಟೆಡ್ ಡ್ಯಾಂನಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ಕೆಲವು ದಿನಗಳಿಂದ ಇಳಿಕೆ ಕಾಣುತ್ತಿದ್ದ ತುಂಬೆ ಡ್ಯಾಂನ ನೀರಿನ ಮಟ್ಟ ಗುರುವಾರ 6 ಮೀ.ನಷ್ಟಿದೆ.
೫,೨೮ ಮೀಟರ್ ಇಳಿದಿದ್ದ ನೀರಿನ ಮಟ್ಟ ಈ ವರ್ಷವೂ ಇಳಿಕೆಯಾದರೂ 6 ಮೀಟರ್ನಷ್ಟು ಕಾಯ್ದುಕೊಂಡಿರುವುದು ವಿಶೇಷ. ಇನ್ನೊಂದೆಡೆ, ಕಳೆದ ವರ್ಷ ಎ.17ರಂದು ಎಎಂಆರ್ ಡ್ಯಾಂನಲ್ಲಿ 15.25 ಮೀ. ನೀರಿನ ಸಂಗ್ರಹವಿದ್ದರೆ, ಈಗ 18.90 ಮೀ. ನೀರು ಸಂಗ್ರಹವಿದೆ.
ಬೆಳ್ತಂಗಡಿ, ಸುಬ್ರಹ್ಮಣ್ಯ ಸಹಿತ ಪಶ್ಚಿಮ ಘಟ್ಟ ಪ್ರದೇಶ ವ್ಯಾಪ್ತಿಯಲ್ಲಿ ಕೆಲವು ದಿನಗಳಿಂದ ಉತ್ತಮ ಮಳೆಯಾದ ಕಾರಣ ದಿಂದ ಬಿಸಿಲಿನ ಬೇಗೆಯ ಮಧ್ಯೆಯೂ ನೇತ್ರಾವತಿ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ವಿವಿಧ ಡ್ಯಾಂಗಳಲ್ಲಿ ಹೀಗಾಗಿ ನೀರಿನ ಮಟ್ಟ ಏರಿಕೆಯಾಗಿದೆ.
ಎಎಂಆರ್ ಡ್ಯಾಂನಲ್ಲಿ ಗರಿಷ್ಠ ನೀರು ನಿಲ್ಲಿಸಿದ ಬಳಿಕ ಹೆಚ್ಚುವರಿಯಾಗಿ ಇದ್ದ ವೀರನ್ನು ಬಿಟ್ಟ ಅನಂತರ ಹೊಸದಾಗಿ ನಿರ್ಮಿಸಲಾದ ಜಕ್ಕಿಬೆಟ್ಟು ಡ್ಯಾಂನಲ್ಲಿ ನೀರು ಭರ್ತಿಯಾಗಿ ತುಂಬೆ ಕಡೆಗೆ ಬಿಡಲಾಗಿತ್ತು. ಇದರಂತೆ ಸದ್ಯ ತುಂಬೆಯಲ್ಲಿ ನೀರಿನ ಮಟ್ಟ 6 ಮೀ. ಇದೆ.
ತುಂಬೆ ವೆಂಟೆಡ್ ಡ್ಯಾಂನಲ್ಲಿ ನೀರಿನ ಮಟ್ಟ ಇಳಿಕೆಯಾಗುತ್ತಿರುವುದನ್ನು ಮನಗಂಡ ಜಿಲ್ಲಾಡಳಿತ ಡ್ಯಾಂನ ಕೆಳ ಭಾಗದ ಅಡ್ಯಾರ್ ಡ್ಯಾಂ ಮೂಲಕ ಶೇಖರಣೆಯಾದ ಸಿಹಿ ನೀರು ಸುಮಾರು 50 ಎಂಎಲ್‌ಡಿ ನೀರನ್ನು ಪ್ರತಿನಿತ್ಯ ತುಂಬೆ ಡ್ಯಾಂಗೆ ಹಾಯಿಸಿ ನದಿ ನೀರಿನ ಮಟ್ಟವನ್ನು ಕಾಯ್ದುಕೊಳ್ಳಲು ಗಮನಹರಿಸಿತ್ತು.
2023/2024 ಎಪ್ರಿಲ್, ಮೇ ತಿಂಗಳಲ್ಲಿ ಅಡ್ಯಾರ್ ಅಣೆಕಟ್ಟಿನಿಂದ ಶೇಖರಣೆಯಾದ ಹಿನ್ನೀರನ್ನು ಬ್ಯಾಕ್ ಪಂಪಿಂಗ್ (ಸುಮಾರು 13 ಪಂಪು) ಮೂಲಕ ತುಂಬೆ ಅಣೆಕಟ್ಟಿಗೆ ಪಂಪಿಂಗ್ ಮಾಡಲಾಗಿತ್ತು. ಬೇಸಗೆಯ ಮಧ್ಯೆಯೂ ದಕ್ಷಿಣ ಕನ್ನಡದಲ್ಲಿ ಉತ್ತಮ ಮಳೆಯಾದ್ದರಿಂದ ಕುಡಿಯುವ ನೀರಿನ ಸಮಸ್ಯೆಯ ಆತಂಕ ದೂರವಾಗಿದೆ. ತುಂಬೆ ಡ್ಯಾಂನಲ್ಲಿ 6 ಮೀ.ನೀರು ಸಂಗ್ರಹವಿದೆ. ಎಎಂಆರ್ ಡ್ಯಾಂನಲ್ಲಿಯೂ ಉತ್ತಮ ನೀರಿನ ಸಂಗ್ರಹವಿದೆ. ಹೀಗಾಗಿ ನಗರದಲ್ಲಿ ನೀರು ರೇಶನಿಂಗ್ ಮಾಡುವ ಅಗತ್ಯತೆ ಎದುರಾಗದು.