ಮರ್ಯಾದೆ ಹತ್ಯೆ: ಅನ್ಯ ಜಾತಿ ಯುವಕನನ್ನು ಪ್ರೀತಿಸಿದ ಮಗಳನ್ನು ಕೊಂದು ಸುಟ್ಟ ತಂದೆ

ಕಲಬುರಗಿ : ಬಿಸಿಲನಗರಿ ಕಲಬುರಗಿಯಲ್ಲಿ (kalburgi) ಬೆಚ್ಚಿಬೀಳಿಸೋ (shocking incident) ಘಟನೆ ನಡೆದಿದೆ. ಮರ್ಯಾದೆ ಪ್ರಶ್ನೆಗೆ ಹೆತ್ತಪ್ಪನೇ ಪುತ್ರಿಯನ್ನು ಬರ್ಬರವಾಗಿ ಹತ್ಯೆಗೈದಿದ್ದಾನೆ.

ಅನ್ಯಜಾತಿಯ ಯುವಕನನ್ನು ಪ್ರೀತಿಸುತ್ತಿದ್ದ ಮಗಳನ್ನು ತಂದೆ ಹಾಗೂ ಕುಟುಂಬಸ್ಥರು ಸೇರಿ ಹತ್ಯೆ ಮಾಡಿ, ಸುಟ್ಟು ಹಾಕಿದ್ದಾರೆ
ಕಲಬುರಗಿ ಮೇಳಕುಂದಾ (ಬಿ) ಗ್ರಾಮದಲ್ಲಿ ಘಟನೆ ನಡೆದಿದೆ.
ಅಪ್ಪನಿಂದಲೇ ಕೊಲೆಯಾದ ಯುವತಿಯನ್ನು ಕವಿತಾ ಕೊಳ್ಳೂರ (18) ಎಂದು ಗುರುತಿಸಲಾಗಿದೆ. ಆಕೆಯ ತಂದೆ ಶಂಕರ ಕೊಳ್ಳೂರ ಹಾಗೂ ಸಂಬಂಧಿಗಳಾದ ಶರಣು, ದತ್ತು ಚೋಳಾಭರ್ಧಿ ವಿರುದ್ಧ ಕೊಲೆ ಆರೋಪ ಕೇಳಿಬಂದಿದೆ.
ಇನ್ನು ಫರಹತಾಬಾದ್ ಠಾಣೆ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಕವಿತಾ, ಅದೇ ಗ್ರಾಮದ ಅನ್ಯಜಾತಿಯ ಯುವಕನನ್ನು ಪ್ರೀತಿಸುತ್ತಿದ್ದಳು. ಇದ್ರಿಂದ ಕೋಪಗೊಂಡ ಕುಟುಂಬಸ್ಥರು ಮರ್ಯಾದೆ ಹತ್ಯೆ ನಡೆಸಿದ್ದಾರೆ ಎಂಬ ವಿಚಾರ ಪೊಲೀಸರಿಗೆ ವ್ಯಕ್ತವಾಗಿದೆ.
ಪಿಯುಸಿ ಓದಲು ಕಲಬುರಗಿಗೆ ಬಂದಿದ್ದ ವೇಳೆ ಇವರಿಬ್ಬರ ನಡುವೆ ಪರಿಚಯವಾಗಿತ್ತು. ಪ್ರೀತಿ ವಿಚಾರ ಮನೆಯವರಿಗೆ ಗೊತ್ತಾಗಿದೆ. ಹೀಗಾಗಿಯೇ ಕಾಲೇಜು ಬಿಡಿಸಿ ಆಕೆಯನ್ನು ಮನೆಯಲ್ಲೇ ಇರು ವಂತೆ ಹೇಳಿದ್ದರು.ಆದರೆ ಕವಿತಾ ಮದುವೆ ಮಾಡಲು ಪಟ್ಟು ಹಿಡಿದಿದ್ದಳೆಂದು ಪೊಲೀಸರ ತನಿಖೆ ವೇಳೆ ಗೊತ್ತಾಗಿದೆ.
ಮಧ್ಯರಾತ್ರಿ ಮನೆಯವರು ಸೇರಿ ಕವಿತಾಳ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ ನಂತರ ಕೀಟನಾಶಕ ಸುರಿದು ಆತ್ಮಹತ್ಯೆ ರೀತಿ ಬಿಂಬಿಸಲು ಯತ್ನಿಸಿದ್ದರು. ಬೆಳಗ್ಗೆ ಗ್ರಾಮದ ಹೊರವಲಯದ ಜಮೀನಿಗೆ ದೇಹವನ್ನು ಕೊಂಡೊಯ್ದು ಸುಟ್ಟಿದ್ದರು ಎಂದು ತನಿಖೆಯಿಂದ ಗೊತ್ತಾಗಿದೆ.
ಸದ್ಯ ಪೊಲೀಸರು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಮೂಳೆ ಅವಶೇಷಗಳನ್ನು ಸಂಗ್ರಹಿಸಿ ಕಳುಹಿಸಿದ್ದಾರೆ.ಗ್ರಾಮದಲ್ಲಿ ಉದ್ವಿಗ್ನತೆ ಉಂಟಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಚುವರಿ ಪೊಲೀಸ್ ಪಡೆ ನಿಯೋಜಿಸಲಾಗಿದೆ. ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ. ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕವಿತಾ ಕುಟುಂಬದ ಸದಸ್ಯರನ್ನು ವಶಕ್ಕೆ ಪಡೆಯಲಾಗಿದೆ.
ಇನ್ನು, ದೇಶದಲ್ಲಿ ಅದರಲ್ಲೂ ಉತ್ತರ ಪ್ರದೇಶದಲ್ಲಿ ಮಹಿಳೆಯರ ಮೇಲೆ ನಿರಂತರ ದೌರ್ಜನ್ಯಗಳು ನಡೆಯುತ್ತಲೇ ಇದ್ದು, ಇದೀಗ ಅಮ್ರೋಹಾ ಜಿಲ್ಲೆಯ ಕಲಖೇಡ ಎಂಬಲ್ಲಿ ಅತ್ತೆ ಹಾಗೂ ಮಾವ ಸೇರಿ 23 ವರ್ಷದ ಸೊಸೆಗೆ ವರದಕ್ಷಿಣೆ ಕಿರುಕುಳ ನೀಡಿ ಆಸಿಡ್ ಕುಡಿಸಿ ಹತ್ಯೆ ಮಾಡಿರುವ ಘಟನೆ ನಡೆದಿದೆ.
ಮೃತ ಮಹಿಳೆಯನ್ನು ಗುಲ್ಫಿಜಾ ಎಂದು ಗುರುತಿಸಲಾಗಿದೆ. ಕಳೆದ ಒಂದು ವರ್ಷದ ಹಿಂದೆಯಷ್ಟೇ ಕಲಖೇಡ ಗ್ರಾಮದ ಪರ್ವೇಜ್ ಎಂಬಾತನನ್ನು ವಿವಾಹವಾಗಿದ್ದಳು. ಇದಾಗಿ ಕೆಲವೇ ತಿಂಗಳಲ್ಲಿ ಪರ್ವೇಜ್ ನ ತಂದೆ – ತಾಯಿ 10 ಲಕ್ಷ ರೂ. ಹಣ ಹಾಗೂ ಕಾರನ್ನು ನೀಡುವಂತೆ ಒತ್ತಾಯಿಸಲು ಆರಂಭಿಸಿದ್ದಾರೆ.
ಆದರೆ ಅತ್ತೆ – ಮಾವನ ಮಾತನ್ನು ಗುಲ್ಫಿಜಾ ದಿಕ್ಕರಿಸಿದ್ದಾಳೆ ಜೊತೆಗೆ ವರದಕ್ಷಿಣೆಯ ಬಗ್ಗೆ ತನ್ನ ಮನೆಯವರ ಬಳಿ ಕೂಡ ಮಾತನಾಡಿರಲಿಲ್ಲ. ಇದೇ ರೀತಿ ಮೂರ್ನಾಲ್ಕು ತಿಂಗಳುಗಳ ಕಾಲ ನಡೆದಿದೆ. ಆದರೆ ಇದ್ಯಾವುದಕ್ಕೂ ಇವಳು ಬಗ್ಗುವುದಿಲ್ಲ ಎಂದು ತಿಳಿದು ಆಸಿಡ್ ಕುಡಿಸಿದ್ದಾರೆ.
ವರದಕ್ಷಿಣೆ ಕೊಡುವಂತೆ ಕೇಳಿದರೂ ಕೂಡ ಕೊಡದ ಹಿನ್ನಲೆ ಅತ್ತೆ – ಮಾವ ಇಬ್ಬರು ಸೇರಿ ಬಲವಂತವಾಗಿ ಗುಲ್ಫಿಜಾ ಅವರಿಗೆ ಆಸಿಡ್ ಕುಡಿಸಿದ್ದಾರೆ. ಬಳಿಕ ನೋವಿನಿಂದ ನರಳಾಡುತ್ತಿದ್ದ ಗುಲ್ಫಿಜಾನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸುದೀರ್ಘ 17 ದಿನದ ಚಿಕಿತ್ಸೆ ನೀಡಿದರೂ ಕೂಡ ಹೊಟ್ಟೆಯೊಳಗೆ ಸಂಪೂರ್ಣ ಸುಟ್ಟು ಹೋದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಯುವತಿ ಸಾವನ್ನಪ್ಪಿದ್ದಾಳೆ.
ಸದ್ಯ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಗುಲ್ಫಿಜಾರ ತಂದೆ ಫರ್ಕಾನ್ ನೀಡಿದ ದೂರಿನ ಮೇರೆಗೆ, ಪತಿ ಪರ್ವೇಜ್, ಅಸಿಮ್, ಗುಲಿಸ್ತಾ, ಮೋನಿಶ್, ಸೈಫ್, ಡಾ. ಭೂರಾ ಮತ್ತು ಬಬ್ಬು ಎಂಬ ಏಳು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಎಲ್ಲಾ ಆರೋಪಿಗಳನ್ನು ಬಂಧಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.