ಪೊಲೀಸ್ ಇಲಾಖೆ ಭ್ರಷ್ಟಾಚಾರಕ್ಕೆ ಗೃಹ ಸಚಿವರ ಎಚ್ಚರಿಕೆ: “ಲಂಚ ಪಡೆಯುವುದನ್ನು ಗಂಭೀರವಾಗಿ ಪರಿಗಣಿಸುತ್ತೇವೆ; ಗೊತ್ತಾದರೆ ತಕ್ಷಣ ಅಮಾನತು”

ಬೆಂಗಳೂರು: ಪೊಲೀಸ್ ಇಲಾಖೆಯೇ (Police Department) ಆಗಲಿ ಸರ್ಕಾರದ ಯಾವುದೇ ಇಲಾಖೆಯಲ್ಲಿಯೇ ಆಗಲಿ ಲಂಚ ಪಡೆಯೋದನ್ನ ನಾವು ಗಂಭೀರವಾಗಿ ಪರಿಗಣಿಸುತ್ತೇವೆ ಎಂದು ಗೃಹ ಸಚಿವ ಪರಮೇಶ್ವರ್ (Parameshwar) ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರಿನಲ್ಲಿ (Bengaluru) ಮಗಳ ಅಂತ್ಯ ಸಂಸ್ಕಾರಕ್ಕೆ ತಂದೆಯಿಂದ ಪೊಲೀಸರು ಲಂಚ ಪಡೆದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಪೊಲೀಸ್ ಇಲಾಖೆ ಆಗಿರಲಿ ಯಾವುದೇ ಇಲಾಖೆ ಆಗಿರಲಿ ಹಣ ತೆಗೆದುಕೊಳ್ಳೋದನ್ನ ನಾವು ಕಠಿಣವಾಗಿ ಪರಿಗಣಿಸುತ್ತೇವೆ. ಪೊಲೀಸ್ ಇಲಾಖೆಯಲ್ಲಿ ಇಂತಹ ಮಾಹಿತಿ ಬಂದರೆ 1,000 ಆಗಿರಲಿ, 5,000 ಆಗಿರಲಿ 500 ರೂ. ಆಗಲಿ ಲಂಚ ತಗೊಳ್ಳೋದನ್ನ ನಾವು ಪ್ರೋತ್ಸಾಹ ಮಾಡೊಲ್ಲ. ಗೊತ್ತಾದ ಕೂಡಲೇ ಅವರ ಮೇಲೆ ಕ್ರಮ ತೆಗೆದುಕೊಂಡು ಅಮಾನತು ಮಾಡುತ್ತೇವೆ. ಅಲ್ಲದೇ ಇಲಾಖೆ ವತಿಯಿಂದ ತನಿಖೆ ಮಾಡುತ್ತೇವೆ. ತನಿಖೆಯಲ್ಲಿ ಸತ್ಯ ಅಂತ ಗೊತ್ತಾದ್ರೆ, ಅಮಾನತು ಕೂಡಾ ಮಾಡುತ್ತೇವೆ ಎಂದಿದ್ದಾರೆ.
ಯಾವುದೇ ಅಂತಹ ಘಟನೆಗಳು ನಮ್ಮ ಹಿರಿಯ ಅಧಿಕಾರಿಗಳ ಗಮನಕ್ಕೆ ಅಥವಾ ನಮ್ಮ ಗಮನಕ್ಕೆ ಬಂದರೆ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ಈ ಬಗ್ಗೆ ಪೊಲೀಸ್ ಇಲಾಖೆಗೆ ನಿರ್ದಿಷ್ಟ ಸೂಚನೆ ಕೊಟ್ಟಿದ್ದೇನೆ. ನಮ್ಮ ಪೊಲೀಸ್ ಕಾನ್ಫರೆನ್ಸ್‌ಗಳಲ್ಲಿ ಸಿಎಂ ಕೂಡಾ ಇದನ್ನ ಹೇಳಿದ್ದಾರೆ. ನಾನು ಕೂಡಾ ಹೇಳಿದ್ದೇನೆ. ಇಂತಹ ಘಟನೆಗಳನ್ನ ನಾವ್ಯಾರು ಪ್ರೋತ್ಸಾಹ ಮಾಡೋದಿಲ್ಲ. ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ಡಿಜಿ ಅವರಿಗೆ ಸೂಚನೆಯನ್ನು ಈಗಾಗಲೇ ಸೂಚನೆ ನೀಡಲಾಗಿದೆ. ಅದನ್ನ ಕಾರ್ಯಗತ ಮಾಡುತ್ತೇವೆ ಎಂದು ತಿಳಿಸಿದ್ದಾರೆ.