ಮಣ್ಣಿನಲ್ಲಿ ಮರೆವಾಗಿದ್ದ ಇತಿಹಾಸ – ಬಾದಾಮಿ ಚಾಲುಕ್ಯರ ಶಾಸನ ಮಾದಾಪುರದಲ್ಲಿ ಪತ್ತೆ

ಮಾದಾಪುರ: ತಾಲ್ಲೂಕಿನ ಮಾದಾಪುರ ಗ್ರಾಮದ ಕೆರೆಯಲ್ಲಿ ಸ್ಥಳೀಯರು ಜೆಸಿಬಿ ಮೂಲಕ ಮಣ್ಣನ್ನು ತೆಗೆಯುವಾಗ ಶಾಸನವೊಂದು ಕಂಡು ಬಂದಿದೆ ಎಂದು ಹಂಪಿ ಕಮಲಾಪುರ ಪುರಾತತ್ವ, ಸಂಗ್ರಹಾಲಯಗಳ ಮತ್ತು ಪರಂಪರೆ ಇಲಾಖೆ ನಿರ್ದೇಶಕ ಆರ್.ತೇಜೇಶ್ವರ ತಿಳಿಸಿದರು.

ಮಾದಾಪುರ ಗ್ರಾಮಕ್ಕೆ ಭಾನುವಾರ ಭೇಟಿ ನಡಿ ಶಿಲಾ ಶಾಸನವನ್ನು ಪರಿಶೀಲಿಸಿದ ಬಳಿಕ ಮಾಹಿತಿ ನೀಡಿದರು.
ಈ ಶಾಸನವು ಐದು ಅಡಿ ಉದ್ದವಿದ್ದು ಹಳೆಗನ್ನಡದ 17 ಸಾಲಿನ ಶಾಸನವನ್ನು ಒಳಗೊಂಡಿದೆ. ಇದು ಕ್ರಿ.ಶ 2ನೇ ಶತಮಾನದ ಬಾದಾಮಿ ಚಾಲುಕ್ಯರ ಒಂದನೇ ವಿಕ್ರಮಾಧಿತ್ಯ (ಕ್ರಿ.ಶ 654-681)ನ ಕಾಲದ ಶಾಸನವಾಗಿದೆ. ಒಂದನೇ ವಿಕ್ರಮಾಧಿತ್ಯನ ಸಾಮ್ರಾಜ್ಯದಲ್ಲಿದ್ದ ಅಧಿಕಾರಿ ಸಿಂಘವೆಣ್ಣನು ಬಳ್ಳಾವಿ ನಾಡನ್ನು ಆಳುತ್ತಿದ್ದಾಗ ತೆರಿಗೆ ಮನ್ನಾ ಮಾಡಿದ ಹಾಗೂ ಕೆರೆಯನ್ನು ನಿರ್ಮಿಸಿದ ಓಜರಿಗೆ ಆರು ಮತ್ತರು ಭೂಮಿಯನ್ನು ದಾನ ನೀಡಿದ್ದನ್ನು ಹಾಗೂ ಈ ಭೂಮಿಯು ಬಳ್ಳಾವಿ ಎಪ್ಪತ್ತರ ಒಕ್ಕಲುಗಳಿಗೆ ಸಲ್ಲುತ್ತದೆ ಎಂದು ಶಾಸನದಲ್ಲಿ ಬರೆಯಿಸಿದ್ದಾನೆ ಎಂದು ಹೇಳಿದರು.
ಪ್ರೊ.ಶ್ರೀನಿವಾಸ ಪಾಡಿಗರ, ರಮೇಶ ಹಿರೇಜಂಬೂರು, ರವಿಕುಮಾರ ನವಲಗುಂದ, ಮಂಜಪ್ಪ ಚುರ್ಚಿಗುಂಡಿ, ಗ್ರಾಮ ಆಡಳಿತ ಅಧಿಕಾರಿ ವಿಶ್ವನಾಥ, ಗ್ರಾಮಸ್ಥರಾದ ಬುಜಂಗ, ವೀರೇಶ, ಎಂ.ಆರ್.ಬಸಯ್ಯ ಕ್ಷೇತ್ರ ಕಾರ್ಯದಲ್ಲಿ ಪಾಲ್ಗೊಂಡಿದ್ದರು.
