Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ತಿಪಟೂರು ಕೊಬ್ಬರಿ ಮಾರುಕಟ್ಟೆಯಲ್ಲಿ ಐತಿಹಾಸಿಕ ದಾಖಲೆ: ಕ್ವಿಂಟಾಲ್‌ಗೆ ₹26,167

Spread the love

Half Cut Dry Coconut Copra (సగం కట్ ఎండు కొబ్బరి ) - mmruchulu.com

ತಿಪಟೂರು: ತೆಂಗು ಬೆಳೆಗಾರರಿಗೆ ಈಗ ಸಂಭ್ರಮದ ಕಾಲ. ಕೊಬ್ಬರಿಗೆ ಇತಿಹಾಸದಲ್ಲೇ ಕಾಣದಂತಹ ಚಿನ್ನದ ಬೆಲೆ ಬಂದಿದೆ. ಇದರಿಂದ ತೆಂಗು ಬೆಳೆಗಾರರ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ.ಏಷ್ಯಾದಲ್ಲೇ ಅತಿದೊಡ್ಡ ಮಾರುಕಟ್ಟೆ ಎಂದು ಹೆಸರಾಗಿರುವ ತಿಪಟೂರು ಎಪಿಎಂಸಿ ಕೊಬ್ಬರಿ ಮಾರುಕಟ್ಟೆಯಲ್ಲಿ ಕಳೆದ ಒಂದು ತಿಂಗಳಿಂದ ಕೊಬ್ಬರಿ ಬೆಲೆ ಏರುತ್ತಾ ಸಾಗಿದೆ.

ಜೂನ್‌ 23ರಂದು ಸೋಮವಾರ ನಡೆದ ಕೊಬ್ಬರಿ ಹರಾಜಿನಲ್ಲಿ ಕ್ವಿಂಟಾಲ್‌ ಕೊಬ್ಬರಿಗೆ ಐತಿಹಾಸಿಕ ದಾಖಲೆಯ 26,167 ರೂ. ತಲುಪಿ ಹೊಸ ಸಾರ್ವಕಾಲಿಕ ದಾಖಲೆ ಬರೆಯಿತು.

ಕಳೆದ ವರ್ಷ ಕೊಬ್ಬರಿ ಬೆಲೆ ಕುಸಿತದಿಂದ ಕಂಗಾಲಾಗಿದ್ದ ರೈತ ಬೆಂಬಲ ಬೆಲೆಗಾಗಿ ಬೃಹತ್‌ ಹೋರಾಟವನ್ನೇ ಹಮ್ಮಿಕೊಂಡು ಕೊನೆಗೆ ಕೇಂದ್ರ ಸರಕಾರ 12 ಸಾವಿರ ರೂ., ರಾಜ್ಯ ಸರಕಾರ 1500ರೂ. ನೀಡಿ ಅಂತಿಮವಾಗಿ ರೈತರಿಗೆ 13500 ರೂ. ದೊರೆತಿದ್ದೇ ಅತಿ ಹೆಚ್ಚು ಬೆಲೆಯಾಗಿತ್ತು. ಆದರೆ, ಈ ವರ್ಷದಿಂದ ಎಪಿಎಂಸಿ ನಿಯಮಗಳಲ್ಲಿ ಬಹಳಷ್ಟು ಬದಲಾವಣೆಗಳನ್ನು ತಂದು ಮಾರುಕಟ್ಟೆಯನ್ನು ನಿಯಂತ್ರಿಸುತ್ತಿದ್ದ ಕೆಲವು ಪಟ್ಟಭದ್ರರಿಂದ ತಪ್ಪಿಸಿ ರೈತ ಸ್ನೇಹಿ ವಾತಾವರಣ ನಿರ್ಮಿಸಿದರ ಫಲವಾಗಿ ರೈತನ ಕೊಬ್ಬರಿಗೆ ಉತ್ತಮ ಬೆಲೆ ದೊರೆಯಲು ಪ್ರಾರಂಭವಾಯಿತು. ಈ ಮೂಲಕ ನಿರಂತರ ಏರಿಕೆಯನ್ನು ಕಾಣುತ್ತಿದೆ.

ಕೇರಳ ಹಾಗೂ ತಮಿಳುನಾಡಿನಲ್ಲಿ ತೆಂಗು ಇಳುವರಿ ಕುಸಿದು ಆ ರಾಜ್ಯಗಳಿಗೆ ನಮ್ಮ ಕೊಬ್ಬರಿ ಹೆಚ್ಚಾಗಿ ಹೋಗುತ್ತಿದ್ದುದೂ ಕೊಬ್ಬರಿಗೆ ಡಿಮ್ಯಾಂಡ್‌ ಹೆಚ್ಚಾಗಲು ಇನ್ನೊಂದು ಕಾರಣವಾಗಿದೆ. ಈಗ ಕೊಬ್ಬರಿಯು ಹೆಚ್ಚಾಗಿ ಎಣ್ಣೆ ತಯಾರಿಕೆಗೆ ಹೋಗುತ್ತಿದೆ. ಶ್ರಾವಣ ಮಾಸ ಪ್ರಾರಂಭವಾದರೆ ಹಬ್ಬ ಹರಿದಿನಗಳು ಶುರುವಾಗಿ ತಿನಿಸಿಗೆ ಕೊಬ್ಬರಿ ಬಳಕೆ ಹೆಚ್ಚಾಗುತ್ತದೆ. ಜುಲೈ-ಆಗಸ್ಟ್‌ ತಿಂಗಳಿನಿಂದ ಉತ್ತರ ಭಾರತದಿಂದ ಕೂಡ ಕೊಬ್ಬರಿ ಬೇಡಿಕೆ ಹೆಚ್ಚಾಗುತ್ತದೆ. ಮುಂಬರುವ ಶ್ರಾವಣ ಮಾಸದಲ್ಲಿ ಕೊಬ್ಬರಿ ಬೆಲೆ ಇನ್ನೂ ಹೆಚ್ಚಾಗುವ ಸಾಧ್ಯತೆಯಿದ್ದು 30 ಸಾವಿರ ದಾಟುವ ನಿರೀಕ್ಷೆಯಿದೆ.

ಹಿಂದಿನ ವರ್ಷಗಳಲ್ಲಿ ಕ್ವಿಂಟಾಲ್‌ ಕೊಬ್ಬರಿಗೆ ರೈತರಿಗೆ 8ರಿಂದ 10 ಸಾವಿರವಷ್ಟೇ ಸಿಗುತ್ತಿತ್ತು. ಆದರೆ ಕಳೆದ ಮೇ 5ರಂದು 18 ಸಾವಿರ ಇದ್ದ ಕೊಬ್ಬರಿ ಜೂನ್‌ 23ಕ್ಕೆ 26,211 ರೂ. ತಲುಪಿದ್ದು, ಕೇವಲ 50 ದಿನಗಳಲ್ಲಿರೂ.8167 ಬೆಲೆ ಹೆಚ್ಚಳವಾಗಿರುವುದನ್ನು ಕಾಣಬಹುದಾಗಿದೆ.

ಹರಾಜು ದಿನಾಂಕ- ಕೊಬ್ಬರಿ ಆವಕ -ಬೆಲೆ ರೂ.ಗಳಲ್ಲಿ

05-5-2025 -3843 ಚೀಲ (1650 ಕ್ವಿಂಟಾಲ್‌) 18000-00
12-5-2025 -6550 ಚೀಲ (2815 ಕ್ವಿಂಟಾಲ್‌) 18244-00
19-05-2025 -8263 ಚೀಲ (3553 ಕ್ವಿಂಟಾಲ್‌) 18900-00
22-05-2025- 6038 ಚೀಲ (2596 ಕ್ವಿಂಟಾಲ್‌) 19566-00
26-5-2025- 7112 ಚೀಲ (3056 ಕ್ವಿಂಟಾಲ್‌) 20900-00
05-6-2025- 4675 ಚೀಲ (2016 ಕ್ವಿಂಟಾಲ್‌) 21100-00
09-6-2025 6714 ಚೀಲ (2887 ಕ್ವಿಂಟಾಲ್‌) 22356-00
12-06-2025 7043 ಚೀಲ (3028 ಕ್ವಿಂಟಾಲ್‌) 24129-00
19-06-2025 6125 ಚೀಲ (2633 ಕ್ವಿಂಟಾಲ್‌) 24211-00
23-06-2025 7795 ಚೀಲ (3351 ಕ್ವಿಂಟಾಲ್‌) 26167-00

ಎಪಿಎಂಸಿ ಜಾರಿಗೊಳಿಸಿದ ನೂತನ ಕ್ರಮಗಳಿಂದ ಕೊಬ್ಬರಿ ಬೆಲೆಯನ್ನು ವ್ಯಾಪಾರಸ್ಥರು ನಿಗದಿಪಡಿಸುವುದು ತಪ್ಪಿತು. ತನ್ನ ಕೊಬ್ಬರಿಗೆ ರೈತನೇ ಬೆಲೆ ನಿಗದಿ ಮಾಡುವ ಕಾಲ ಬಂದಿದೆ. ಎಪಿಎಂಸಿಯಲ್ಲಿ ಅಡ್ಜೆಸ್ಟ್‌ಮೆಂಟ್‌ ಟೆಂಡರ್‌ ನಿಂತಿದೆ. ಟೆಂಡರ್‌ ಬೆಲೆಗೆ ಕೊಬ್ಬರಿ ಕೊಡಬೇಕೋ ಬಿಡಬೇಕೋ ಅನ್ನುವುದನ್ನೂ ರೈತನೇ ತೀರ್ಮಾನ ಮಾಡುತ್ತಾನೆ. ತೆಂಗು ಇಳುವರಿ ಈ ವರ್ಷ ತುಂಬಾ ಕಡಿಮೆಯಾಗಿಲ್ಲ. ಮುಂದಿನ ವರ್ಷ ಇಳುವರಿ ಇನ್ನೂ ಕುಂಠಿತಗೊಳ್ಳುತ್ತದೆ. ಮಾರುಕಟ್ಟೆಯನ್ನು ಇದೇ ರೀತಿ ಬಿಗಿಯಾಗಿ ನಿರ್ವಹಿಸಿದರೆ ಇನ್ನೂ ಎರಡು ವರ್ಷ ಬೆಲೆ ಕಡಿಮೆಯಾಗುವುದಿಲ್ಲ. ಇದರಿಂದ ರೈತರಿಗೆ ಬಹಳ ಅನುಕೂಲವಾಗುತ್ತದೆ ಎಂದಿದ್ದಾರೆ ನ್ಯಾಮಗೌಡ, ಕಾರ್ಯದರ್ಶಿ, ಎಪಿಎಂಸಿ, ತಿಪಟೂರು.

ಕೊಬ್ಬರಿಗೆ ದಾಖಲೆ ಬೆಲೆ ದೊರೆತಿರುವುದು ಎಲ್ಲ ರೈತರಿಗೂ ಅತೀವ ಸಂತೋಷ ತಂದಿದೆ. ರೈತರ ಬಳಿ ಕೊಬ್ಬರಿ ಕಡಿಮೆ ಇದ್ದು ಮುಂದೆ ಇನ್ನೂ ಬೆಲೆ ಹೆಚ್ಚಳವಾಗುವ ಸಂಭವವಿದೆ. ರೈತರು ಆತುರವಾಗಿ ತಮ್ಮಲ್ಲಿರುವ ಕೊಬ್ಬರಿಯನ್ನು ಮಾರುಕಟ್ಟೆಗೆ ತರಬಾರದು. ಹೆಚ್ಚಾಗಿರುವ ಬೆಲೆ ಶಾಶ್ವತವಾಗಿ ಉಳಿದರೆ ತೆಂಗು ಬೆಳೆಯುವ ರೈತರು ನೆಮ್ಮದಿಯಿಂದ ಬದುಕಬಹುದು ಎಂದಿದ್ದಾರೆ ದೇವರಾಜು ತಿಮ್ಲಾಪುರ, ರಾಜ್ಯ ರೈತ ಸಂಘ, ತಿಪಟೂರು


Spread the love
Share:

administrator

Leave a Reply

Your email address will not be published. Required fields are marked *