33 ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ದಂಪತಿಗೆ ಮರಣದಂಡನೆ ಶಿಕ್ಷೆ

ಉತ್ತರ ಪ್ರದೇಶ : ಬಂಡಾ ಜಿಲ್ಲೆಯ ಪೋಕ್ಸೋ (POCSO) ವಿಶೇಷ ನ್ಯಾಯಾಲಯವು 33 ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಕ್ಕಾಗಿ ದಂಪತಿಗಳಾದ ರಾಮಭವನ್ ಮತ್ತು ದುರ್ಗಾವತಿ ಅವರಿಗೆ ಮರಣ ದಂಡನೆ ವಿಧಿಸಿದೆ.ಆರೋಪಿಗಳು 3 ವರ್ಷದ ಪುಟ್ಟ ಮಕ್ಕಳೂ ಸೇರಿದಂತೆ ಒಟ್ಟು 33 ಮಕ್ಕಳ ಮೇಲೆ 2010 ರಿಂದ 2020 ರವರೆಗೆ ಬಂಡಾ ಮತ್ತು ಚಿತ್ರಕೂಟ ಪ್ರದೇಶಗಳಲ್ಲಿ ಅತಿ ಕ್ರೂರವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದರು. ಅಸಹಜ ಲೈಂಗಿಕ ಕ್ರಿಯೆ, ಮಕ್ಕಳ ಅಶ್ಲೀಲತೆ ಮತ್ತು ಅಪರಾಧ ಪಿತೂರಿ ಸೇರಿದಂತೆ ಹಲವು ಗಂಭೀರ ಸೆಕ್ಷನ್‌ಗಳ ಅಡಿಯಲ್ಲಿ ಇವರು ತಪ್ಪಿತಸ್ಥರೆಂದು ಸಾಬೀತಾಗಿದೆ.

2020 ರಲ್ಲಿ ಸಿಬಿಐ (CBI) ಈ ಪ್ರಕರಣವನ್ನು ಕೈಗೆತ್ತಿಕೊಂಡಿತ್ತು. ತನಿಖೆಯ ವೇಳೆ ಆರೋಪಿಗಳು ಮಕ್ಕಳಿಗೆ ಹಣ, ಉಡುಗೊರೆ ಮತ್ತು ಆನ್‌ಲೈನ್ ಗೇಮ್‌ಗಳ ಆಮಿಷ ಒಡ್ಡಿ ಈ ಕೃತ್ಯ ಎಸಗುತ್ತಿರುವುದು ಬೆಳಕಿಗೆ ಬಂದಿತ್ತು. ರಾಮಭವನ್ ನೀರಾವರಿ ಇಲಾಖೆಯಲ್ಲಿ ಜೂನಿಯರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ.ನ್ಯಾಯಾಲಯವು ಪ್ರತಿ ಸಂತ್ರಸ್ತ ಮಗುವಿಗೆ ತಲಾ 10 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ಆದೇಶಿಸಿದೆ. ಅಲ್ಲದೆ, ಆರೋಪಿಗಳ ಮನೆಯಿಂದ ವಶಪಡಿಸಿಕೊಂಡ ಹಣವನ್ನು ಎಲ್ಲಾ ಸಂತ್ರಸ್ತರಿಗೆ ಸಮಾನವಾಗಿ ಹಂಚುವಂತೆ ಸೂಚಿಸಿದೆ.