ಕಸಾಯಿಖಾನೆ ವಿರುದ್ಧ ಭುಗಿಲೆದ್ದ ಹಿಂದೂ ಸಂಘಟನೆ: ಪೋಲಿಸ್- ಹೋರಾಟಗಾರರ ವಾಗ್ವಾದ

ಕಸಾಯಿ ಖಾನೆಯಲ್ಲಿ ಅಕ್ರಮವಾಗಿ ಗೋವುಗಳ ವಧೆ ಮಾಡಲಾಗುತ್ತಿದೆ ಎಂದು ಆರೋಪಿಸಿ, ಧಾರವಾಡದಲ್ಲಿ ಕಸಾಯಿ ಖಾನೆಯ ಬಳಿಯೇ ಹಿಂದೂ ಸಂಘಟನೆಯ ಮುಖಂಡರು ಪ್ರತಿಭಟನೆ ನಡೆಸಿ ಗೋ ವಧೆ ಮಾಡುವವರ ವಿರುದ್ಧ ಆಕ್ರೋಶ ಹೊರಹಾಕಿದರು. ಈ ವೇಳೆ ಪೊಲೀಸ್ ಮತ್ತು ಹೋರಾಟಗಾರರ ನಡುವೆ ಮಾಚಿನ ಚಕಮಕಿಯು ನಡೆಯಿತು.

ಧಾರವಾಡದ ಶಿವಾಜಿ ವೃತ್ತದ ಬಳಿ ಇರುವ ಕಸಾಯಿ ಖಾನೆಯಲ್ಲಿ ಗೋವುಗಳ ವಧೆ ಮಾಡುತ್ತಿರುವುದಾಗಿ ಆರೋಪಿಸಿ, ವಿಶ್ವ ಹಿಂದೂ ಪರಿಷದ್ ಹಾಗೂ ಬಜರಂಗದಳ ಕಾರ್ಯಕರ್ತರು ಕಸಾಯಿಖಾನೆಗೆ ನುಗ್ಗಲು ಯತ್ನಿಸಿರುವ ಘಟನೆಯು ನಡೆದಿದೆ.
ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ, ಈ ಕಸಾಯಿಖಾನೆಯಲ್ಲಿ ಅಕ್ರಮವಾಗಿ ಗೋವುಗಳನ್ನು ತಂದು ವಧೆ ಮಾಡಲಾಗುತ್ತಿದೆ. ಕೂಡಲೇ ಗೋವುಗಳನ್ನು ಬಿಡುಗಡೆ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಒತ್ತಾಯಿಸಿದರು.
ಪರಿಸ್ಥಿತಿ ಕೈ ಮೀರುವ ಮುಂಚೆ ಸ್ಥಳಕ್ಕೆ ಡಿಸಿಪಿ ಮಹಾನಿಂಗ ನಂದಗಾವಿ, ಎಸಿಪಿ ಪ್ರಶಾಂತ ಸಿದ್ಧನಗೌಡರ ಸೇರಿದಂತೆ ಇನ್‌ಸ್ಪೆಕ್ಟರ್‌ಗಳು ಭೇಟಿ ನೀಡಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಕಸಾಯಿಖಾನೆಗೆ ನುಗ್ಗದಂತೆ ತಡೆಯೊಡ್ಡಿದರು.
ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರರ ಮಧ್ಯೆ ಮಾತಿನ ಚಕಮಕಿ ಕೂಡ ನಡೆಯಿತು. ಈ ಕಸಾಯಿ ಖಾನೆ ಪಾಕಿಸ್ತಾನದಲ್ಲಿದೆಯೇ? ನಾವು ಕಾನೂನು ಕೈಗೆ ತೆಗೆದುಕೊಳ್ಳುವುದಿಲ್ಲ. ಕಸಾಯಿ ಖಾನೆಗೆ ನೀವೇ ಹೋಗಿ ನೋಡಿ. ಅಲ್ಲಿ ಜಾನುವಾರುಗಳಿವೆ ಎಂದು ಪ್ರತಿಭಟನಾಕಾರರು ಪೊಲೀಸರಿಗೆ ಮನವಿ ಮಾಡಿದರು. ಸದ್ಯ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಹೆಚ್ಚಿನ ಪೊಲೀಸರನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ.
