ಇರಾನ್‌ನಲ್ಲಿ ಹಿಜಾಬ್ ವಿವಾದ: ಕಡ್ಡಾಯ ನಿಯಮ ಪ್ರತಿಪಾದಿಸುವ ಸುಪ್ರೀಂ ನಾಯಕನ ಆಪ್ತನ ಮಗಳ ಮದುವೆಯಲ್ಲೇ ನಿಯಮ ಉಲ್ಲಂಘನೆ!

ಟೆಹ್ರಾನ್: ಇರಾನ್‌ನ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ (Ayatollah Ali Khamenei) ನೇತೃತ್ವದ ಕಟ್ಟಾ ಇಸ್ಲಾಮಿಕ್ ಆಡಳಿತವು ಇದೀಗ ಹೊಸ ವಿವಾದಕ್ಕೆ ಸಿಲುಕಿಕೊಂಡಿದೆ. ಖಮೇನಿಯ ಆಪ್ತ ಸಹಾಯಕ ಶಮ್ಖಾನಿ (Ali Shamkhani) ಪುತ್ರಿಯ ವಿವಾಹದಲ್ಲಿ (Wedding) ವಧು ಹಾಗೂ ಆಕೆಯ ತಾಯಿ ಹಿಜಾಬ್ (Hijab) ಧರಿಸದೇ ಕಾಣಿಸಿಕೊಂಡಿದ್ದು ವಿವಾದಕ್ಕೀಡಾಗಿದೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

2024ರಲ್ಲಿ ಟೆಹ್ರಾನ್‌ನ ಐಷಾರಾಮಿ ಹೋಟೆಲ್‌ನಲ್ಲಿ ಈ ಮದುವೆ ನಡೆದಿದ್ದು, ಕಳೆದ ಮೂರ್ನಾಲ್ಕು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಈ ವೀಡಿಯೋ ಸದ್ದು ಮಾಡುತ್ತಿದೆ. ಹಿಜಾಬ್ ಧರಿಸುವುದು ಮಹಿಳೆಯ ಕರ್ತವ್ಯ ಎಂದು ಪ್ರತಿಪಾದಿಸುವ ಖಮೇನಿ ಆಪ್ತನ ಮಗಳ ಮದುವೆಯಲ್ಲೇ ನಿಯಮ ಉಲ್ಲಂಘನೆಯಾಗಿದೆ ಎಂದು ಆಕ್ರೋಶ ವ್ಯಕ್ತವಾಗುತ್ತಿದೆ. ಈ ಮೂಲಕ ಇರಾನ್‌ನಲ್ಲಿ ಹಿಜಾಬ್ ವಿರುದ್ಧದ ಹೋರಾಟವನ್ನು ಬಲವಂತವಾಗಿ ಹತ್ತಿಕ್ಕುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಶಮ್ಖಾನಿ ಮುಖವಾಡ ಕಳಚಿ ಬಿದ್ದಿದೆ.
ಹಿಜಾಬ್ ಕಡ್ಡಾಯಗೊಳಿಸುವ ಕಾನೂನು ತೆರವುಗೊಳಿಸುವಂತೆ ಇರಾನ್‌ನಾದ್ಯಂತ ಮಹಿಳೆಯರು 2022ರಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು. ಈ ವೇಲೆ ಶಮ್ಖಾನಿ ರಾಷ್ಟ್ರೀಯ ಭದ್ರತಾ ಮಂಡಳಿಯ ನಾಯಕತ್ವ ವಹಿಸಿದ್ದರು. ಅಲ್ಲದೇ ಪ್ರತಿಭಟನೆಯಲ್ಲಿ ತೊಡಗಿದ್ದ ಮಹಿಳೆಯರನ್ನು ಹಿಂಸಿಸಲಾಗಿತ್ತು. ಆದರೆ ಶಮ್ಖಾನಿ ಪುತ್ರಿಯ ವಿವಾಹದಲ್ಲಿ ವಧು ಹಾಗೂ ಆಕೆಯ ತಾಯಿ ಹಿಜಾಬ್ ಧರಿಸದೇ ಇರುವುದು ತೀವ್ರ ಆಕ್ರೋಶಕ್ಕೆ ಗುರಿಯಾಗಿದೆ.
ವೀಡಿಯೋದಲ್ಲಿ ಶಮ್ಖಾನಿ ಪುತ್ರಿ ಬಿಳಿಬಣ್ಣದ ಸ್ಟಾçಪ್‌ಲೆಸ್ ಉಡುಗೆಯನ್ನು ಧರಿಸಿದ್ದು, ಪತ್ನಿ ನೀಲಿ ಬಣ್ಣದ ವೆಸ್ಟರ್ನ್ ಶೈಲಿಯ ಬಟ್ಟೆಯಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಜನರ ಕೆಂಗಣ್ಣಿಗೆ ಗುರಿಯಾಗಿದೆ. ಹಿಜಾಬ್ ಕಡ್ಡಾಯ ನಿಯಮವನ್ನು ದಶಕಗಳಿಂದ ಒತ್ತಾಯವಾಗಿ ಹೇರಲಾಗುತ್ತಿರುವ ಇರಾನ್‌ನಲ್ಲಿ ಈ ವೀಡಿಯೋ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಇನ್ನು ಈ ಕುರಿತು ಇರಾನ್‌ನಿಂದ ಗಡಿಪಾರಾದ ಮಹಿಳಾ ಪರ ಹೋರಾಟಗಾರ್ತಿ ಮಸಿಹ್ ಅಲಿನೆಜಾದ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, ಇರಾನ್‌ನ ಉನ್ನತ ನಾಯಕರಲ್ಲಿ ಒಬ್ಬರಾದ ಶಮ್ಖಾನಿ ಅವರ ಮಗಳು ಸ್ಟಾçಪ್‌ಲೆಸ್ ಉಡುಗೆಯಲ್ಲಿ ಅದ್ಧೂರಿ ವಿವಾಹ ಮಾಡಿಕೊಂಡಿದ್ದಾರೆ. ಕೂದಲು ತೋರಿಸಿದ್ದಕ್ಕಾಗಿ ಅದೇ ಇರಾನ್‌ನಲ್ಲಿ ಸಾಮಾನ್ಯ ಮಹಿಳೆಯರನ್ನು ಹೊಡೆದು ಕೊಲ್ಲಲಾಯಿತು. ಇದನ್ನೇ ಬೂಟಾಟಿಕೆ ಎನ್ನುವುದು. ಇತರ ಹೆಣ್ಣುಮಕ್ಕಳಿಗೆ ಹೇಗಿರಬೇಕೆಂದು ಬೋಧಿಸುತ್ತಾರೆ. ಇವರ ಹೆಣ್ಣುಮಕ್ಕಳು ಡಿಸೈನರ್ ಉಡುಗೆ ಧರಿಸಿ ಓಡಾಡುತ್ತಾರೆ. ಗುಂಡು, ಲಾಠಿ ಪ್ರಹಾರ, ಜೈಲುಶಿಕ್ಷೆಯ ಮೂಲಕ ಇಸ್ಲಾಮಿಕ್ ಮೌಲ್ಯಗಳನ್ನು ಹೇರುತ್ತಿದ್ದಾರೆ ಎಂದು ಟೀಕಿಸಿದ್ದಾರೆ.