ಸ್ನಾನಗೃಹದಲ್ಲಿ ರಹಸ್ಯ ಕ್ಯಾಮೆರಾ: ಮನೆ ಮಾಲೀಕನ ವಿರುದ್ಧ ದೂರು, ಲಖನೌದಲ್ಲಿ ಬಂಧನ!

ಲಖನೌ: ಯುವತಿಯೊಬ್ಬಳ ಸ್ನಾನಗೃಹದಲ್ಲಿ ರಹಸ್ಯ ಕ್ಯಾಮೆರಾ ಅಳವಡಿಸಿ ಸ್ನಾನ ಮಾಡುವುದನ್ನು ಲೈವ್ ಆಗಿ ವೀಕ್ಷಿಸುತ್ತಿದ್ದ ಮನೆ ಮಾಲೀಕನ ವಿರುದ್ಧ ಪ್ರಕರಣ ದಾಖಲಾಗಿದೆ.

ಈ ಘಟನೆ ಉತ್ತರ ಪ್ರದೇಶದ ಲಖನೌದಲ್ಲಿ ನಡೆದಿದ್ದು, ಬಹ್ರೈಚ್ ಮೂಲದ ಯುವತಿ ದುಬಗ್ಗಾ ಪೊಲೀಸರಿಗೆ ದೂರು ನೀಡಿದ್ದಾರೆ.
ಜೂನ್ 24ರಂದು ಯುವತಿ, ಸ್ನಾನ ಮಾಡುವಾಗ ಒಂದು ವಸ್ತುವನ್ನು ನೋಡುತ್ತಾರೆ. ಅದನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಅದು ಕ್ಯಾಮೆರಾ ಎಂಬುದು ಆಕೆಗೆ ಗೊತ್ತಾಗುತ್ತದೆ. ಇದರಿಂದ ಆಘಾತಗೊಂಡ ಆಕೆ ಇನ್ನಷ್ಟು ಪರೀಶೀಲಿಸಿದಾಗ ಆ ಕ್ಯಾಮೆರಾಗೆ ವೈ-ಫೈ ಕನೆಕ್ಷನ್ ಇರುವುದು ಗೊತ್ತಾಗುತ್ತದೆ. ಅದರ ಸಹಾಯದಿಂದ ಯುವತಿ ಸ್ನಾನ ಮಾಡುವುದನ್ನು ಆ ಮನೆಯ ಮಾಲೀಕ ಲೈವ್ ಆಗಿ ವೀಕ್ಷಿಸುತ್ತಿದ್ದ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ.

ಕ್ಯಾಮೆರಾ ಪತ್ತೆಯಾಗಿ ತಾನು ಸಿಕ್ಕಿಬೀಳುತ್ತಿದ್ದಂತೆ ಮನೆಯ ಮಾಲೀಕ, ಆಕೆಯ ಬಳಿಗೆ ಹೋಗಿ ಕ್ಷಮೆಯಾಚಿಸಿದ್ದಾನೆ. ಅಲ್ಲದೆ, ಪೊಲೀಸರಿಗೆ ದೂರು ನೀಡುವುದಾಗಿ ಹೇಳಿದಾಗ, ದರ್ಪದ ಮಾತುಗಳನ್ನಾಡಿದ್ದಾನೆ. ಏನಾದರೂ ದೂರು ನೀಡಿದರೆ ಅತ್ಯಾಚಾರ ಎಸಗುವುದಾಗಿ ಮತ್ತು ಆಕೆಯ ಕುಟುಂಬಕ್ಕೆ ಹಾನಿ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಸದ್ಯ ದುಬಗ್ಗ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ದೂರು ಸ್ವೀಕರಿಸಿ, ಎಫ್‌ಐಆರ್ ದಾಖಲಿಸಿದ್ದು, ತನಿಖೆ ಆರಂಭಿಸಿದ್ದಾರೆ. ಈಗಾಗಲೇ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ
