ಕುವೈತ್ನಲ್ಲಿ ಹಿಜ್ಬುಲ್ಲಾ ‘ಸ್ಲೀಪರ್ ಸೆಲ್’ ಪತ್ತೆ: ಆರು ಮಂದಿ ಬಂಧನ; ಪ್ರಮುಖ ನಾಯಕರ ಹ*ತ್ಯೆಗೆ ಸಂಚು

ಕುವೈತ್: ಹಿಜ್ಜುಲ್ಲಾದೊಂದಿಗೆ ಸಂಪರ್ಕ ಹೊಂದಿದೆ ಎಂದು ಶಂಕಿಸಲಾದ ಬಂಡುಕೋರರ ಜಾಲವನ್ನು ಭದ್ರತಾ ಪಡೆಗಳು ಭೇದಿಸಿದ್ದು, ಆರು ಮಂದಿಯನ್ನು ಬಂಧಿಸಿದ್ದಾರೆ ಎಂದು ಕುವೈತ್ ಆಂತರಿಕ ಸಚಿವಾಲಯ ತಿಳಿಸಿದೆ.
ಬಂಧಿತರಲ್ಲಿ ಐದು ಮಂದಿ ಕುವೈತ್ ನಾಗರಿಕರು ಮತ್ತು ಒಬ್ಬ ವಿದೇಶಿ ಪ್ರಜೆ ಸೇರಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ 14 ಮಂದಿಯನ್ನು ಗುರುತಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇವರಲ್ಲಿ ಐದು ಮಂದಿ ಕುವೈತ್ ನಾಗರಿಕರು, ಇಬ್ಬರು ಇರಾನಿಯರು, ಇಬ್ಬರು ಲೆಬನಾನಿನ ನಾಗರಿಕರು ಹಾಗೂ ದೇಶದಿಂದ ಪಲಾಯನಗೊಂಡಿರುವ ಐದು ಮಂದಿ ಸೇರಿದ್ದಾರೆ ಎಂದು ತಿಳಿದುಬಂದಿದೆ.

ವಿಚಾರಣೆಯಲ್ಲಿ ಬಂಧಿತರು ಸರ್ಕಾರದ ಪ್ರಮುಖ ಸಂಸ್ಥೆಗಳು ಮತ್ತು ಪ್ರಮುಖ ನಾಯಕರನ್ನು ಗುರಿಯಾಗಿಸಿಕೊಂಡು ಹತ್ಯೆ ಕಾರ್ಯಾಚರಣೆಗಳನ್ನು ರೂಪಿಸಿದ್ದಾಗಿ ಒಪ್ಪಿಕೊಂಡಿದ್ದಾರೆ. ಈ ಕಾರ್ಯಗಳನ್ನು ನಿರ್ವಹಿಸಲು ಜನರನ್ನು ನೇಮಿಸಲು ಯತ್ನಿಸಿದ್ದರೆಂಬ ಮಾಹಿತಿಯನ್ನೂ ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ.
“ದೇಶದ ಭದ್ರತೆ ಅತ್ಯಂತ ಮುಖ್ಯ ಯಾವುದೇ ಬೆದರಿಕೆಯನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ. ಇಂತಹ ಚಟುವಟಿಕೆಗಳಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ” ಎಂದು ಸಚಿವಾಲಯ ಹೇಳಿದೆ.
ಪ್ರಾದೇಶಿಕ ಸಂಘರ್ಷ ಆರಂಭವಾದ ಬಳಿಕ ಕುವೈತ್ ನಲ್ಲಿ ಪತ್ತೆಯಾದ ಮೂರನೇ ‘ಸ್ವೀಪರ್ ಸೆಲ್ ಇದಾಗಿದೆ. ಕಳೆದ ವಾರ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ನಲ್ಲಿಯೂ ಇದೇ ರೀತಿಯ ಜಾಲ ಪತ್ತೆಯಾಗಿತ್ತು.