ದ.ಕ.ದಲ್ಲಿ ಮಳೆಯ ಅಬ್ಬರ: ಮಂಗಳೂರು ನಗರ-ಗ್ರಾಮಾಂತರಗಳಲ್ಲಿ ನಾಶಹಾನಿ, ಜನಜೀವನ ಅಸ್ತವ್ಯಸ್ತ

ಮಂಗಳೂರು : ದಕ್ಷಿಣಕನ್ನಡ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆ ಅಲ್ಲೋಲ ಕಲ್ಲೊಲವನ್ನೇ ಸೃಷ್ಠಿಸಿದೆ. ಕಳೆದ ರಾತ್ರಿಯಿಂದ ಒಂದೇ ಸಮನೆ ಸುರಿಯುತ್ತಿರುವ ಮಳೆ ಅಪಾರ ಹಾನಿಯುಂಟು ಮಾಡಿದ್ದು, ಹಲವು ಪ್ರದೇಶಗಳಲ್ಲಿ ಪ್ರವಾಹದ ಪರಿಸ್ಥಿತಿ ತಂದೊಡ್ಡಿದೆ.

ಮಂಗಳೂರು ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಸತತ ಮಳೆಯಾಗಿದ್ದು, ಅಲ್ಲಲ್ಲಿ ಮನೆ, ಕಾಂಪೌಂಡ್ ಕುಸಿತಗೊಂಡಿವೆ. ಮರಗಳು ಉರುಳಿವೆ. ಭಾರೀ ಮಳೆಯಿಂದ ಜಲಾವೃತಗೊಂಡ ನಗರದ ಮಿಷನ್ ಸ್ಟ್ರೀಟ್ ರಸ್ತೆ ಮತ್ತು ರಾವ್ ಆ್ಯಂಡ್ ರಾವ್ ವೃತ್ತ, ಕೊಪ್ಪರ ಹಿತ್ಲು ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿ ಅಪಾಯದಲ್ಲಿ ಸಿಲುಕಿದ್ದ ಜನರನ್ನು ರಕ್ಷಣೆ ಮಾಡಲಾಗಿದೆ.

ಮಂಗಳೂರು ಮಹಾನಗರ ಪಾಲಿಕೆಯ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಅನೇಕ ಪ್ರದೇಶಗಳು ಜಲಾವೃತಗೊಂಡಿವೆ. ಮನೆ, ಅಂಗಡಿಗಳಿಗೆ ನೀರು ನುಗ್ಗಿ ಅಪಾರ ನಷ್ಟ ಉಂಟಾಗಿದೆ. ನಗರದ ಹಲವು ಕಡೆಗಳಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಿದ ಡಿವೈಎಫ್ಐ ಸಂಘಟನೆಯ ಕಾರ್ಯಕರ್ತರು ಅಪಾಯದಲ್ಲಿದ್ದ ಜನರನ್ನು ಸುರಕ್ಷಿತ ಸ್ಥಳಕ್ಕೆ ತಲುಪಿಸಿದರು.
ಬಿಜೈ ಕಾಪಿಕಾಡ್ ನಲ್ಲಿ ದೊಡ್ಡ ಮರವೊಂದು ಬಿದ್ದು ರಸ್ತೆ ಮೇಲೆ ಬಿದ್ದಿದ್ದು, ವಾಹನ ಸಂಚಾರಕಕ್ಕೆ ತೊಡಕಾಗಿದೆ.ನಗರದ ಹಂಪನಕಟ್ಟೆ ಕೇರಳ ಸಮಾಜ ಕಟ್ಟಡದ ಹಿಂಬದಿಯ ಗುಡ್ಡ ಕುಸಿದು ಕಟ್ಟಡದ ಗೋಡೆ ಹಾನಿಯಾಗಿದ್ದು, ಕೆಲವು ವಾಹನಗಳು ಮಣ್ಣಿನಡಿ ಸಿಲುಕಿವೆ.