ಭಾರೀ ಮಳೆಗೆ ಸಕಲೇಶಪುರದಲ್ಲಿ ಹೋಟೆಲ್ ಗೋಡೆ ಕುಸಿದು ನಾಲ್ವರಿಗೆ ಗಾಯ

ಹಾಸನ: ಭಾರೀ ಮಳೆಗೆ ಹೋಟೆಲ್‍ನ ಗೋಡೆ ಕುಸಿದು ಮೂವರು ಮಹಿಳೆಯರು ಹಾಗೂ ಓರ್ವ ವ್ಯಕ್ತಿ ಗಾಯಗೊಂಡ ಘಟನೆ ಸಕಲೇಶಪುರ ಪಟ್ಟಣದಲ್ಲಿ ನಡೆದಿದೆ.ಗಾಯಾಳುಗಳನ್ನು ಸಫಿಯಾ, ಫಯಿಮಾ ಭಾನು, ಶಹನಾಜ್ ಮತ್ತು ನಿಜಾರ್ ಎಂದು ಗುರುತಿಸಲಾಗಿದೆ. ಗಾಯಗೊಂಡ ಮಹಿಳೆಯರು ಸಕಲೇಶಪುರದ ಹೊಸ ಬಸ್ ನಿಲ್ದಾಣದ ಬಳಿ ಹೋಟೆಲ್ ಹಾಗೂ ಕ್ಯಾಂಟಿನ್‍ನ್ನು ನಡೆಸುತ್ತಿದ್ದರು. ಮಳೆಯಿಂದ ಶಿಥಿಲಗೊಂಡಿದ್ದ ಒಂದು ಭಾಗದ ಗೋಡೆ ಕುಸಿದಿದೆ.

ಮಳಿಗೆಗಳು ದೇವಾಲದಕೆರೆ ಗ್ರಾಮದ ಅಶೋಕಗೌಡ ಎಂಬವರಿಗೆ ಸೇರಿದ್ದು ಎಂದು ತಿಳಿದು ಬಂದಿದೆ. ಗಾಯಾಳುಗಳಿಗೆ ಸಕಲೇಶಪುರ ಕ್ರಾಫರ್ಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.ಸಕಲೇಶಪುರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.