ಪ್ರೇಯಸಿ ಕೈಕೊಟ್ಟಿದ್ದಕ್ಕೆ ಮನನೊಂದು ಯುವಕ ಆತ್ಮಹತ್ಯೆ; ವಿಡಿಯೋ ಮಾಡಿ ಅಳಲು ತೋಡಿಕೊಂಡ ಯುವಕ!

ಗುಂಡ್ಲುಪೇಟೆ (ಚಾಮರಾಜನಗರ): ಪ್ರೀತಿಸಿದ ಹುಡುಗಿ ಕೈ ಕೊಟ್ಟಳು ಎಂದು ವಿಡಿಯೋ ಕಳಿಸಿ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಬನ್ನಿತಾಳಪುರ ಗ್ರಾಮದಲ್ಲಿ ನಡೆದಿದೆ.

ತಾಲೂಕಿನ ಬನ್ನಿತಾಳಪುರ ಗ್ರಾಮದ ಸಂತೋಷ್ (24) ಮೃತ ವ್ಯಕ್ತಿ.
ಈತ ಚಾಮರಾಜನಗರ ತಾಲೂಕಿನ ಸಾಗಡೆ ಗ್ರಾಮದಲ್ಲಿ ವಾಸವಿದ್ದು, ಅದೇ ಗ್ರಾಮದ ಯುವತಿಯೊಬ್ಬಳ ಪ್ರೀತಿಸಿದ್ದನು. ಆದರೆ ಯುವತಿ ಬೇರೊಬ್ಬ ಹುಡುಗನಿಗೆ ಮೆಸೇಜ್ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಆಕೆ ಲವ್ ಬ್ರೇಕ್ ಆಪ್ ಎಂದಿದ್ದಾಳೆ. ಇದರಿಂದ ಮನನೊಂದು ವೀಡಿಯೋ ಮಾಡಿ, ವಾಟ್ಸ್ಯಾಪ್ ಸ್ಟೇಟಸ್ ನಲ್ಲಿ ತಮ್ಮಿಬ್ಬರ ಫೋಟೋಗಳನ್ನು ಹಾಕಿಕೊಂಡು ನೇಣಿಗೆ ಶರಣಾಗಿದ್ದಾನೆ ಎಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ತನ್ನ ಸಾವಿಗೆ ಯುವತಿಯೇ ಕಾರಣ, ಅವಳನ್ನು ಬಿಟ್ಟು ಇನ್ಯಾರು ಕಾರಣರಲ್ಲ ಎಂದು ಯುವಕ ಸಂತೋಷ್ ವಿಡಿಯೋ ಮಾಡಿದ್ದಾನೆ. ತೆರಕಾಂಬಿ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮೃತದೇಹವನ್ನು ಚಾಮರಾಜನಗರ ಜಿಲ್ಲಾಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಎಎಸ್ಪಿ, ಡಿವೈಎಸ್ಪಿ ಭೇಟಿ:
ನೇಣು ಬಿಗಿದುಕೊಂಡು ದೇಹ ಪತ್ತೆಯಾದ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಶಿಧರ್, ಡಿವೈಎಸ್ಪಿ ಲಕ್ಷ್ಮಯ್ಯ, ಬೇಗೂರು ಸರ್ಕಲ್ ಇನ್ಸ್ ಪೆಕ್ಟರ್ ವನರಾಜು, ಗುಂಡ್ಲುಪೇಟೆ ಪೊಲೀಸ್ ಇನ್ಸ್ ಪೆಕ್ಟರ್ ಜಯಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿ, ಸೂಕ್ತ ತನಿಖೆ ನಡೆಸುವಂತೆ ತೆರಕಣಾಂಬಿ ಸಬ್ ಇನ್ಸ್ ಪೆಕ್ಟರ್ ಮಹೇಶ್ ಗೆ ಸೂಚನೆ ನೀಡಿದ್ದಾರೆ.
ಅನುಮಾನಸ್ಪದ ದೂರು:
ಬನ್ನಿತಾಳಪುರ ಗ್ರಾಮದ ಹೊರ ವಲಯದ ಜಮೀನಿನ ಮರವೊಂದರಲ್ಲಿ ಸಂತೋಷ್ ಮೃತದೇಹ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರಿಂದ ಮೃತನ ಸಹೋದರ ಸಂಪತ್ ಅನುಮಾನ ವ್ಯಕ್ತಪಡಿಸಿ ದೂರು ನೀಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಲಾಗಿದೆ ಎಂದು ತೆರಕಣಾಂಬಿ ಠಾಣೆ ಸಬ್ ಇನ್ಸ್ ಪೆಕ್ಟರ್ ಮಹೇಶ್ ತಿಳಿಸಿದ್ದಾರೆ.
