ಉಡುಪಿಯಲ್ಲಿ ಮನಕಲಕುವ ಘಟನೆ: ಸಾಲಬಾಧೆಯಿಂದ ಮುಖ್ಯೋಪಾಧ್ಯಾಯ ಆತ್ಮಹತ್ಯೆ!

ಉಡುಪಿ: ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯರೊಬ್ಬರು ಆತ್ಮಹತ್ಯೆಯಾಗಿರುವ ಶರಣಾಗಿರುವ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ. ಹಣಕಾಸಿನ ತೊಂದರೆಯಿಂದ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಮೃತರನ್ನು ಕುಬೇರಾ ಧರ್ಮ ನಾಯಕ್ (49) ಎಂದು ಗುರುತಿಸಲಾಗಿದೆ.
ಕುಬೇರಪ್ಪ ಎಂದೇ ಕರೆಯಲಾಗುತ್ತಿದ್ದ ಕುಬೇರಾ ಧರ್ಮ ನಾಯಕ್ ಅವರು ಹಳ್ಳಿಹೊಳೆ ಗ್ರಾಮದ ಸುಳ್ಗೋಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸುತ್ತಿದ್ದರು ಎನ್ನಲಾಗಿದೆ.
ಕಮಲಶಿಲೆ ಸೇತುವೆ ಬಳಿ ತನ್ನ ಸ್ಕೂಟರ್ ನಿಲ್ಲಿಸಿರುವ ನಾಯಕ್, ಮರವೊಂದಕ್ಕೆ ತನ್ನ ರೇನ್ ಕೋಟ್ ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೂಲತ: ಚಿತ್ರದುರ್ಗದ ನಾಯಕ್ ಅವರು, ತನ್ನ ಹೆಂಡತಿ ಹಾಗೂ ಮೂವರು ಪುತ್ರಿಯರೊಂದಿಗೆ ಹೊಸಂಗಡಿ ಸರ್ಕಾರಿ ಕ್ವಾರ್ಟಸ್ ನಲ್ಲಿ ವಾಸವಿದ್ದರು. 2002 ರಿಂದ ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಅವರು 2022ರಲ್ಲಿ ಮುಖ್ಯೋಪಾಧ್ಯಾಯರಾಗಿ ಬಡ್ತಿ ಪಡೆದಿದ್ದರು. ಚಿಟ್ ಫಂಡ್ ಸೇರಿದಂತೆ ಸಾಲಬಾಧೆಯಿಂದ ಅವರು ಆತ್ಮಹತ್ಯೆ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.
ಸಾಲಕ್ಕೆ ಸಂಬಂಧಿಸಿದ ದಾಖಲೆಯೊಂದು ಇತ್ತೀಚಿಗೆ ಬೈಂದೂರು ವಲಯ ಶಿಕ್ಷಣ ಕಚೇರಿಗೆ ತಲುಪಿತು ಎನ್ನಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
ಬೈಂದೂರು ವಲಯ ಶಿಕ್ಷಣ ಕಚೇರಿ ಅಧಿಕಾರಿಗಳು, ಸ್ಥಳೀಯ ಪೊಲೀಸರು ಮತ್ತು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸದಸ್ಯರು ಸ್ಥಳಕ್ಕೆ ಭೇಟಿ ನೀಡಿದರು. ಮೃತನ ಪತ್ನಿ ನೀಡಿದ ದೂರಿನ ಆಧಾರದ ಮೇಲೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
