ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಗೈರಾದ ವಿದ್ಯಾರ್ಥಿಗಳ ಪತ್ತೆಗೆ ಶಾಲಾ ಶಿಕ್ಷಣ ಇಲಾಖೆಯಿಂದ “ತಲೆ ಎಣಿಕೆ” ಅಭಿಯಾನ!

ಬೆಂಗಳೂರು: ರಾಜ್ಯದಲ್ಲಿ ಎಸೆಸೆಲ್ಸಿ ಪರೀಕ್ಷೆಗೆ ನೋಂದಾಯಿಸಿಕೊಂಡು ಆ ಬಳಿಕ ಪರೀಕ್ಷೆಗೆ ಹಾಜರಾಗದೆ ಇರುವ ಮತ್ತು ವಿದ್ಯಾರ್ಥಿ ಸಾಧನಾ ನಿಗಾ ವ್ಯವಸ್ಥೆ (ಎಸ್‌ಎಟಿಎಸ್)ಯಲ್ಲಿದ್ದರೂ ಪರೀಕ್ಷೆಗೆ ನೋಂದಾಯಿಸಿಕೊಳ್ಳದ ವಿದ್ಯಾರ್ಥಿಗಳ ಬಗ್ಗೆ ಈಗ ಶಾಲಾ ಶಿಕ್ಷಣ ಇಲಾಖೆ ಗಂಭೀರವಾಗಿ ಚಿಂತಿತವಾಗಿದ್ದು, ಶಾಲೆಗಳಿಗೆ ತೆರಳಿ ವಿದ್ಯಾರ್ಥಿಗಳ ತಲೆ ಎಣಿಕೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದೆ.

ರಾಜ್ಯದಲ್ಲಿ ಪ್ರತೀ ವರ್ಷ 40ರಿಂದ 50 ಸಾವಿರ ವಿದ್ಯಾರ್ಥಿಗಳು ಎಸೆಸೆಲ್ಸಿ ಪರೀಕ್ಷೆಗೆ ನೋಂದಾಯಿಸಿಕೊಂಡರೂ ಪರೀಕ್ಷೆಗೆ ಹಾಜರಾಗುತ್ತಿಲ್ಲ. ಈ ನಿಗೂಢತೆಗೆ ತೆರೆ ಎಳೆಯುವ ನಿಟ್ಟಿನಲ್ಲಿ ಈ ವಿದ್ಯಾರ್ಥಿಗಳು ಡಿಜಿಟಲಿ ಮಾತ್ರವಿದ್ದಾರೆಯೇ ಅಥವಾ ಭೌತಿಕವಾಗಿಯೂ ಇದ್ದಾರೆಯೇ ಎಂಬುದನ್ನು ಪತ್ತೆ ಹಚ್ಚಲು ಶಾಲಾ ಶಿಕ್ಷಣ ಇಲಾಖೆ ತೀರ್ಮಾನಿಸಿದೆ.ಇದೇ ಮಾರ್ಚ್-ಎಪ್ರಿಲ್‌ನಲ್ಲಿ ನಡೆದ ಎಸೆಸೆಲ್ಸಿ ಪರೀಕ್ಷೆಗೆ 8.96 ಲಕ್ಷ ಮಂದಿ ನೋಂದಾಯಿಸಿ ಕೊಂಡಿದ್ದರು.
ಆ ಬಳಿಕ ಪರೀಕ್ಷೆಗೆ ಹಾಜರಾಗಿದ್ದು 8.42 ಲಕ್ಷ ವಿದ್ಯಾರ್ಥಿಗಳು ಮಾತ್ರ. ಅಂದರೆ 54,274 ವಿದ್ಯಾರ್ಥಿಗಳು ಪರೀಕ್ಷೆ-1 ಬರೆದೇ ಇಲ್ಲ. ಈ ಪೈಕಿ ಹಾಜರಾತಿ ಕೊರತೆ ಇರುವ ಮಕ್ಕಳನ್ನು ಹೊರತುಪಡಿಸಿ ಉಳಿದ ಮಕ್ಕಳು ಎಲ್ಲಿದ್ದಾರೆ, ಏನು ಮಾಡುತ್ತಿದ್ದಾರೆ, ಯಾಕೆ ಪರೀಕ್ಷೆ ಬರೆದಿಲ್ಲ ಎಂಬ ಮಾಹಿತಿಯೇ ಶಾಲಾ ಶಿಕ್ಷಣ ಇಲಾಖೆಗೆ ಸಿಗುತ್ತಿಲ್ಲ.
ಅನುದಾನಿತ ಶಾಲೆಗಳಲ್ಲೇ ಹೆಚ್ಚು
ಈ ರೀತಿ ಪರೀಕ್ಷೆಗೆ ನೋಂದಾಯಿಸಿ, ಪರೀಕ್ಷೆಗೆ ಹಾಜರಾಗದ ವಿದ್ಯಾರ್ಥಿಗಳ ಸಂಖ್ಯೆ ಅನುದಾನಿತ ಶಾಲೆಗಳಲ್ಲೇ ಹೆಚ್ಚಿರುವುದು ಶಾಲಾ ಶಿಕ್ಷಣ ಇಲಾಖೆಯಲ್ಲಿ ಒಂದಿಷ್ಟು ಚರ್ಚೆಗೆ ಕಾರಣವಾಗಿದ್ದು, ಶಾಲಾ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್ ಅವರೇ ಈ ವಿದ್ಯಾರ್ಥಿಗಳ ಪತ್ತೆಗೆ ವಿಶೇಷ ಆಸಕ್ತಿ ವಹಿಸಿದ್ದಾರೆ.
ತಾಳೆಯಾಗದಿರುವುದು ಪತ್ತೆ
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ನಿರ್ದೇಶಕ ಎಚ್.ಎನ್. ಗೋಪಾಲಕೃಷ್ಣ ಕೂಡ ಇದನ್ನು ಒಪ್ಪಿಕೊಂಡಿದ್ದು, “ನಾವು ಕಳೆದ ವರ್ಷ ಇಂತಹ ಪ್ರವೃತ್ತಿಗೆ ಕಡಿವಾಣ ಹಾಕಲು ಯತ್ನಿಸಿದ್ದೆವು. ಎಸ್‌ಎಟಿಎಸ್‌ಯಲ್ಲಿದ್ದ ಸಂಖ್ಯೆಗೂ ಎಸ್ಸೆಸೆಲ್ಸಿ ಪರೀಕ್ಷೆಗೆ ನೋಂದಾಯಿಸಿಕೊಂಡ ವಿದ್ಯಾರ್ಥಿಗಳ ಸಂಖ್ಯೆಗೂ ತಾಳೆಯಾಗದಿರುವುದನ್ನು ಗಮನಿಸಿ ಸಂಬಂಧಿತ ಶಾಲೆಗಳಿಗೆ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗೆ ಈ ಬಗ್ಗೆ ಸೂಚನೆ ನೀಡಿದ್ದೆವು. ಆದರೂ ಪರೀಕ್ಷೆಗೆ ನೋಂದಣಿಯಾದ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿಲ್ಲ’ ಎಂದು ಅವರು ವಿವರಿಸಿದ್ದಾರೆ.
ಇದನ್ನು ಗಂಭೀರವಾಗಿ ಪರಿಗಣಿಸಿರುವ ಶಾಲಾ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು, ಅಧಿಕಾರಿಗಳು ಶಾಲಾ ಭೇಟಿಯ ವೇಳೆ ಕಡ್ಡಾಯವಾಗಿ ವಿದ್ಯಾರ್ಥಿಗಳ ತಲೆ ಎಣಿಕೆ ಮಾಡಬೇಕು ಮತ್ತು ಎಸ್‌ಎಟಿಎಸ್‌ನಲ್ಲಿರುವ ವಿದ್ಯಾರ್ಥಿಗಳ ಸಂಖ್ಯೆಗೂ ಹಾಜರಿರುವ ವಿದ್ಯಾರ್ಥಿಗಳ ಸಂಖ್ಯೆಗೂ ತಾಳೆ ಆಗುತ್ತದೆಯೇ ನೋಡಬೇಕು. ಒಂದು ವೇಳೆ ವ್ಯತ್ಯಾಸವಿದ್ದರೆ ಅದನ್ನು ತಿಳಿಸಬೇಕು. ಇದು ಪ್ರತಿ ದಿನ, ಪ್ರತೀ ತಿಂಗಳು ಟ್ರ್ಯಾಕ್ ಆಗಬೇಕು ಎಂಬ ಸೂಚನೆ ನೀಡಿದ್ದಾರೆ.
ಮಕ್ಕಳು ಡಿಜಿಟಲಿ ಇದ್ದು ದೈಹಿಕವಾಗಿ ಇಲ್ಲದಿದ್ದರೆ ಅದು ನಮಗೆ ಗೊತ್ತಾಗಬೇಕು. ಸಾವಿರಾರು ಮಕ್ಕಳ ಸಂಖ್ಯೆ ಈ ರೀತಿ ಇದೆ ಎಂಬುದು ದುಃಖದ ವಿಷಯ. ಆದ್ದರಿಂದ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿದ ವೇಳೆ ಅಲ್ಲಿರುವ ಮಕ್ಕಳ ನೈಜ ಸಂಖ್ಯೆಯನ್ನು ಲೆಕ್ಕ ಹಾಕುವಂತೆ ಸೂಚಿಸಿದ್ದೇವೆ.-ರಶ್ಮಿ ಮಹೇಶ್, ಪ್ರಧಾನ ಕಾರ್ಯದರ್ಶಿ, ಶಾಲಾ ಶಿಕ್ಷಣ ಇಲಾಖೆ
ರಾಕೇಶ್ ಎನ್.ಎಸ್.
