ಜಾತಿ ಗಣತಿ ಕರ್ತವ್ಯದಲ್ಲಿದ್ದಾಗಲೇ ಮುಖ್ಯ ಶಿಕ್ಷಕ ರಾಮಕೃಷ್ಣಪ್ಪ ಹೃದಯಾಘಾತದಿಂದ ಸಾವು

ಚಿಕ್ಕಬಳ್ಳಾಪುರ: ಜಾತಿ ಗಣತಿ ಮಾಡುವ ವೇಳೆ ಶಿಕ್ಷಕನಿಗೆ ಹೃದಯಾಘಾತ ಸಂಭವಿಸಿ ದಾರುಣವಾಗಿ ಮೃತಪಟ್ಟ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯಲ್ಲಿ ನಡೆದಿದೆ. ಜಾತಿ ಗಣತಿಯ ಕರ್ತವ್ಯದಲ್ಲಿದ್ದ ಮುಖ್ಯ ಶಿಕ್ಷಕ ರಾಮಕೃಷ್ಣಪ್ಪ(57) ಮೃತ ದುರ್ದೈವಿ.

ಚಿಂತಾಮಣಿ ತಾಲ್ಲೂಕಿನ ಬೂರಗಮಾಕಲಹಳ್ಳಿ ಗ್ರಾಮದ ನಿವಾಸಿಯಾಗಿರುವ ರಾಮಕೃಷ್ಣಪ್ಪ ಅವರು, ದಿಗವಕೋಟೆ ಗ್ರಾಮದ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಜಾತಿ ಗಣತಿಯ ಕೆಲಸದಲ್ಲಿ ತೊಡಗಿದ್ದ ವೇಳೆ ಅವರಿಗೆ ದಿಢೀರ್ ಹೃದಯಾಘಾತವಾಗಿದೆ. ಕೂಡಲೇ ಅವರನ್ನು ಮುರಗಮಲ್ಲ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿತ್ತು. ಆದರೆ, ಸ್ಥಿತಿ ಗಂಭೀರವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಚಿಂತಾಮಣಿ ನಗರದ ಡೆಕನ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದಾಗ್ಯೂ, ಚಿಕಿತ್ಸೆ ಫಲಕಾರಿಯಾಗದೆ ರಾಮಕೃಷ್ಣಪ್ಪ ಅವರು ಡೆಕನ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ರಾಮಕೃಷ್ಣಪ್ಪ ಅವರ ಅಂತ್ಯಸಂಸ್ಕಾರವು ಚಿಂತಾಮಣಿಯ ಬರ್ನಿಂಗ್ ಹೌಸ್‌ನಲ್ಲಿ ನಡೆಯಿತು. ಘಟನೆಯ ಸ್ಥಳಕ್ಕೆ ಸಹ ಶಿಕ್ಷಕರು ಮತ್ತು ಸಹಪಾಠಿಗಳು ಆಗಮಿಸಿ ಅಂತಿಮ ನಮನ ಸಲ್ಲಿಸಿದರು. ಈ ಘಟನೆಯಿಂದ ಚಿಂತಾಮಣಿ ತಾಲ್ಲೂಕಿನ ಶಿಕ್ಷಕ ಸಮುದಾಯದಲ್ಲಿ ಆಘಾತ ಮತ್ತು ಶೋಕದ ವಾತಾವರಣ ಮನೆಮಾಡಿದೆ.
