ಪೊಲೀಸರ ಅಮಾನತು ಖಂಡಿಸಿ ಹೆಡ್ ಕಾನ್ಸ್‌ಟೆಬಲ್ ಪ್ರತಿಭಟನೆ – ರಾಜಭವನದ ಮುಂದೆ ಧರಣಿ

ಬೆಂಗಳೂರು: ಜೂನ್ 4ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಭಾಗದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಹನ್ನೊಂದು ಆರ್‌ಸಿಬಿ ಅಭಿಮಾನಿಗಳು ಸಾವನ್ನಪ್ಪಿದ್ದಾರೆ. ಈ ದುರಂತದ ಹಿನ್ನೆಲೆಯಲ್ಲಿ ಭದ್ರತೆ ನಿರ್ವಹಣೆ ವೈಫಲ್ಯ ಕಾರಣ ನೀಡಿ ಬೆಂಗಳೂರು ಪೊಲೀಸ್ ಆಯುಕ್ತ ಬಿ.ದಯಾನಂದ್ ಸೇರಿದಂತೆ ಐವರನ್ನು ರಾಜ್ಯ ಸರ್ಕಾರ ಅಮಾನತು ಮಾಡಿದೆ.

ಪೊಲೀಸರ ಅಮಾನತು ಮಾಡಿದ ರಾಜ್ಯ ಸರ್ಕಾರದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದು, ಪೊಲೀಸ್ ಆಯುಕ್ತ ಬಿ.ದಯಾನಂದ್ ಅವರನ್ನು ಅಮಾನತುಗೊಳಿಸಿದ್ದ ಸರ್ಕಾರ ಆದೇಶದ ವಿರುದ್ಧ ಮಡಿವಾಳ ಠಾಣೆಯ ಹೆಡ್ ಕಾನ್ಸ್ಸ್ಟೆಬಲ್ ಪ್ರತಿಭಟನೆ ನಡೆಸಿದ್ದಾರೆ.
ನರಸಿಂಹರಾಜು ಎನ್ನುವವರು ಪೊಲೀಸರ ಅಮಾನತು ಮಾಡಿರುವ ಸರ್ಕಾರದ ನಡೆ ಖಂಡಿಸಿ ರಾಜ್ಯಪಾಲರಿಗೆ ದೂರು ನೀಡಲು ರಾಜಭವನಕ್ಕೆ ತೆರಳಿದ್ದರು. ಈ ವೇಳೆ ಅವರು ಅಂಬೇಡ್ಕರ್ ಫೋಟೋ ಹಿಡಿದು, ಕಪ್ಪುಪಟ್ಟಿ ಧರಿಸಿ ರಾಜಭವನದ ಮುಂದೆ ಪ್ರತಿಭಟನೆ ನಡೆಸಿದ್ದು, ಪೊಲೀಸ್ ಅಧಿಕಾರಿಗಳ ಅಮಾನತು ಆದೇಶ ರದ್ದು ಪಡಿಸಬೇಕು ಎಂದು ಆಗ್ರಹಿಸಿದ್ದಾರೆ. ಸದ್ಯ ವಿಧಾನಸೌಧ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ.
