ಎಚ್‌ಡಿಎಫ್‌ಸಿ ಬ್ಯಾಂಕ್ ದುಬೈ ಶಾಖೆಗೆ ಶಾಕ್: ಹೊಸ ಗ್ರಾಹಕರ ಸೇರ್ಪಡೆ ನಿಷೇಧ

ಶುಕ್ರವಾರ ಅಂದರೆ ಸೆ.26ರಂದು HDFC ಬ್ಯಾಂಕ್ ಲಿಮಿಟೆಡ್ ತನ್ನ ದುಬೈ ಅಂತರರಾಷ್ಟ್ರೀಯ ಹಣಕಾಸು ಕೇಂದ್ರ (DIFC) ಶಾಖೆಯು ದುಬೈ ಹಣಕಾಸು ಸೇವೆಗಳ ಪ್ರಾಧಿಕಾರ (DFSA ದಿಂದ ಹೊಸ ಗ್ರಾಹಕರನ್ನು ಸೇರಿಸಿಕೊಳ್ಳುವುದರ ಮೇಲೆ ನಿರ್ಬಂಧಗಳನ್ನು ವಿಧಿಸುವ ಔಪಚಾರಿಕ ನಿರ್ದೇಶನವನ್ನು ಸ್ವೀಕರಿಸಿರುವುದಾಗಿ ಘೋಷಿಸಿದೆ. ಯುನೈಟೆಡ್ ಅರಬ್ ಎಮಿರೇಟ್ಸ್‌ನ ಪ್ರಮುಖ ಹಣಕಾಸು ನಿಯಂತ್ರಕ ಸಂಸ್ಥೆಯಾದ DFSA, HDFC ಬ್ಯಾಂಕ್‌ನ ಡಿಐಎಫ್‌ಸಿ ಶಾಖೆಯ ಮೇಲೆ ಗಂಭೀರ ಕ್ರಮ ಕೈಗೊಂಡಿದೆ. ಈ ನಿರ್ದೇಶನದಂತೆ ಸೆಪ್ಟೆಂಬರ್ 25, 2025ರ ನಂತರ ಹೊಸ ಗ್ರಾಹಕರನ್ನು ಸೇರ್ಪಡೆಗೊಳಿಸುವುದು, ಹೂಡಿಕೆ ಸೇವೆಗಳು, ಕ್ರೆಡಿಟ್ ವ್ಯವಸ್ಥೆ, ಕಸ್ಟಡಿ ಸೇವೆಗಳು ಹಾಗೂ ಹಣಕಾಸು ಉತ್ಪನ್ನಗಳ ಬಗ್ಗೆ ಸಲಹೆ ನೀಡುವುದು ಸಂಪೂರ್ಣ ನಿಷೇಧಿಸಲಾಗಿದೆ.

ಇದಲ್ಲದೆ, ಶಾಖೆಗೆ ಹಣಕಾಸು ಪ್ರಚಾರಗಳಲ್ಲಿ ತೊಡಗಿಸಿಕೊಳ್ಳುವುದಕ್ಕೂ ನಿರ್ಬಂಧ ಹೇರಲಾಗಿದೆ. ಆದರೆ, ಅಸ್ತಿತ್ವದಲ್ಲಿರುವ ಗ್ರಾಹಕರಿಗೆ ಇದರಿಂದ ಸಮಸ್ಯೆ ಇಲ್ಲ. ಅವರು ಯಾವುದೇ ಅಡಚಣೆ ಇಲ್ಲದೆ ಸೇವೆಗಳನ್ನು ಮುಂದುವರಿಸಬಹುದು. ಈಗಾಗಲೇ ಬ್ಯಾಂಕ್ ಸೇವೆಗಳನ್ನು ಬಳಸಿಕೊಂಡಿದ್ದರೂ ಔಪಚಾರಿಕವಾಗಿ ನೋಂದಾಯಿಸದ ಗ್ರಾಹಕರಿಗೂ ಅವಕಾಶ ನೀಡಲಾಗಿದೆ.
ನಿರ್ಬಂಧ ಏಕೆ?
ಗ್ರಾಹಕರನ್ನು ಬ್ಯಾಂಕಿಂಗ್ ವ್ಯವಸ್ಥೆಗೆ ಸೇರಿಸಿಕೊಳ್ಳುವ ಪ್ರಕ್ರಿಯೆಯಲ್ಲಿನ ಲೋಪ ಹಾಗೂ ನಿಯಮ ಉಲ್ಲಂಘನೆಗಳ ಬಗ್ಗೆ ಕಳವಳ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ನಿರ್ಬಂಧ ಹೊರಡಿಸಲಾಗಿದೆ. DFSA ನೀಡಿದ ನೋಟಿಸ್ ಪ್ರಕಾರ, ಈ ನಿರ್ದೇಶನವು ಸೆಪ್ಟೆಂಬರ್ 26, 2025ರಿಂದ ಜಾರಿಗೆ ಬಂದಿದ್ದು, ಲಿಖಿತ ತಿದ್ದುಪಡಿ ಅಥವಾ ಹಿಂಪಡೆಯುವವರೆಗೆ ಜಾರಿಯಲ್ಲಿಯೇ ಮುಂದುವರಿಯಲಿದೆ.
ಶಾಖೆಯ ಆರ್ಥಿಕ ಪರಿಣಾಮ
HDFC ಬ್ಯಾಂಕ್ ಸ್ಪಷ್ಟಪಡಿಸಿದಂತೆ, ಡಿಐಎಫ್‌ಸಿ ಶಾಖೆಯ ಕಾರ್ಯಾಚರಣೆಗಳು ಬ್ಯಾಂಕಿನ ಒಟ್ಟು ಆರ್ಥಿಕ ಸ್ಥಿತಿಗೆ ಹೆಚ್ಚಿನ ಪ್ರಭಾವ ಬೀರುವುದಿಲ್ಲ. ಸೆಪ್ಟೆಂಬರ್ 23, 2025ರ ಹೊತ್ತಿಗೆ ಶಾಖೆಯು 1,489 ಗ್ರಾಹಕರನ್ನು (ಜಂಟಿ ಖಾತೆದಾರರನ್ನೂ ಒಳಗೊಂಡಂತೆ) ಹೊಂದಿತ್ತು. ಬ್ಯಾಂಕ್ ಈಗಾಗಲೇ DFSA ನಿರ್ದೇಶನಗಳನ್ನು ಅನುಸರಿಸಲು ಕ್ರಮಗಳನ್ನು ಆರಂಭಿಸಿದ್ದು, ನಿಯಂತ್ರಕರೊಂದಿಗೆ ಸಹಕರಿಸುತ್ತಿದೆ. ಅಸ್ತಿತ್ವದಲ್ಲಿರುವ ಗ್ರಾಹಕರ ಸೇವೆ ಮೇಲೆ ಯಾವುದೇ ಪರಿಣಾಮ ಬೀರದೇ ಸಮಸ್ಯೆಯನ್ನು ಶೀಘ್ರದಲ್ಲಿ ಪರಿಹರಿಸುವುದಾಗಿ ಬ್ಯಾಂಕ್ ಭರವಸೆ ನೀಡಿದೆ.
ಹಳೆಯ ವಿವಾದ ಇದಕ್ಕೆ ಕಾರಣ
ಈ ನಿರ್ಬಂಧದ ಹಿಂದೆ ಎರಡು ವರ್ಷಗಳ ಹಿಂದಿನ ಕ್ರೆಡಿಟ್ ಸ್ಯೂಸ್‌ನ ಹೆಚ್ಚುವರಿ ಟಯರ್ – 1 (AT1) ಬಾಂಡ್‌ಗಳ ಅಕ್ರಮ ಮಾರಾಟ ಪ್ರಕರಣವೂ ಒಂದು ಕಾರಣವಾಗಿದೆ. ಹೂಡಿಕೆದಾರರು, ಬ್ಯಾಂಕ್ ಯುಎಇಯಲ್ಲಿನ ತನ್ನ ಕಾರ್ಯಾಚರಣೆಗಳ ಮೂಲಕ ಈ ಅಪಾಯಕಾರಿ ಬಾಂಡ್‌ಗಳನ್ನು ಮಾರಾಟ ಮಾಡಿದೆ ಎಂದು ಆರೋಪಿಸಿದ್ದರು.
2023ರಲ್ಲಿ ಕ್ರೆಡಿಟ್ ಸ್ಯೂಸ್ ಪತನಗೊಂಡಾಗ AT1 ಬಾಂಡ್‌ಗಳ ಮೌಲ್ಯ ಶೂನ್ಯಕ್ಕೆ ಇಳಿಕೆಯಾಗಿದ್ದು, ಅನೇಕ ಶ್ರೀಮಂತ ಅನಿವಾಸಿ ಭಾರತೀಯ ಹೂಡಿಕೆದಾರರು ಭಾರೀ ನಷ್ಟ ಅನುಭವಿಸಿದ್ದರು. ಈ ಹಿನ್ನೆಲೆಯಲ್ಲಿ ನಿಯಂತ್ರಕರು ಡಿಐಎಫ್‌ಸಿಯಲ್ಲಿ ಗ್ರಾಹಕರನ್ನು ಸೇರಿಸಿಕೊಳ್ಳುವ ಪ್ರಕ್ರಿಯೆ ಕಾನೂನುಬದ್ಧವಾಗಿತ್ತೇ ಎಂಬುದನ್ನು ಪರಿಶೀಲಿಸುತ್ತಿದ್ದರು.
HDFC ಬ್ಯಾಂಕ್‌ನ ಡಿಐಎಫ್‌ಸಿ ಶಾಖೆಗೆ DFSA ವಿಧಿಸಿರುವ ನಿರ್ಬಂಧವು ಬ್ಯಾಂಕಿನ ಹೊಸ ಗ್ರಾಹಕರ ಸೇವೆಗಳನ್ನು ನಿಲ್ಲಿಸಿದೆ. ಆದರೆ ಅಸ್ತಿತ್ವದಲ್ಲಿರುವ ಗ್ರಾಹಕರು ಯಾವುದೇ ತೊಂದರೆ ಇಲ್ಲದೆ ಸೇವೆಗಳನ್ನು ಮುಂದುವರಿಸಬಹುದು. ಬ್ಯಾಂಕ್ ಈಗಾಗಲೇ ನಿಯಂತ್ರಕರೊಂದಿಗೆ ಸಹಕರಿಸುತ್ತಿದ್ದು, ನಿರ್ದೇಶನಗಳನ್ನು ಪಾಲಿಸಲು ಕ್ರಮಗಳನ್ನು ಜಾರಿಗೆ ತರುತ್ತಿದೆ. ಈ ನಿರ್ಬಂಧವು ಬ್ಯಾಂಕಿನ ಒಟ್ಟು ಆರ್ಥಿಕ ಸ್ಥಿತಿಗೆ ದೊಡ್ಡ ಹೊಡೆತವಲ್ಲವಾದರೂ, ನಿಯಂತ್ರಕರ ಕಠಿಣ ನಿಲುವು ಗಲ್ಫ್ ಪ್ರದೇಶದ ಬ್ಯಾಂಕಿಂಗ್ ವಲಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.
