ಹಾವೇರಿ: ದಲಿತ ಯುವತಿ ಶಿಲ್ಪಾ ಆತ್ಮಹತ್ಯೆಗೆ ಕಾರಣವಾದ ಫರ್ನಿಚರ್ ಅಂಗಡಿ ಮಾಲೀಕ ರಂಜಾನ್ ನದಾಫ್ ವಿರುದ್ಧ ದೂರು

ಹಾವೇರಿ: ಯುವಕನ ಕಿರುಕುಳಕ್ಕೆ ಬೇಸತ್ತು ದಲಿತ (Dalit) ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಆರೋಪ ಕೇಳಿಬಂದಿದೆ. ಶಿಗ್ಗಾಂವಿ (Shiggaon) ತಾಲೂಕಿನ ಚಿಕ್ಕಮಲ್ಲೂರು ಗ್ರಾಮದ ಶಿಲ್ಪಾ (22) ಮೃತ ಯುವತಿ. ಶಿಗ್ಗಾಂವಿಯ ಫರ್ನಿಚರ್ ಅಂಗಡಿಯೊಂದರ ಮಾಲೀಕ ರಂಜಾನ್ ನದಾಫ್ ಕಿರುಕುಳ ನೀಡಿದ ಆರೋಪಿ.

ಕಳೆದ ವಾರ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಮೃತ ಶಿಲ್ಪಾ ಬೆಳಗಾವಿಯಲ್ಲಿ ಬಿಸಿಎ ಓದುತ್ತಿದ್ದರು. ಶಿಲ್ಪಾ ಶಿಗ್ಗಾಂವಿಯ ನವೀನ್ ಎಂಬ ಯುವಕನನ್ನು ಪ್ರೀತಿಸುತ್ತಿದ್ದರು. ನವೀನ್ ಆರೋಪಿ ರಂಜಾನ್ ನದಾಫ್ನ ಫರ್ನಿಚರ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಆರೋಪಿ ರಂಜಾನ್ ನದಾಫ್ ಮೃತ ಶಿಲ್ಪಾಗೆ ಕರೆ ಮಾಡಿ ಕಿರುಕುಳ ನೀಡಿದ್ದನಂತೆ. ಈತನ ಕಿರುಕುಳಕ್ಕೆ ಬೇಸತ್ತು ಶಿಲ್ಪಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಶಿಲ್ಪಾ ಮತ್ತು ನವೀನ್ ಕಳೆದ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದರು. ಬಿಸಿಎ ವಿದ್ಯಾಭ್ಯಾಸದ ನಿಮಿತ್ತ ಶಿಲ್ಪಾ ಬೆಳಗಾವಿಯ ಹಾಸ್ಟೆಲ್ ಒಂದರಲ್ಲಿ ವಾಸವಿದ್ದರು. ನವೀನ್ ಆರೋಪಿ ರಂಜಾನ್ ನದಾಫ್ನ ಫರ್ನಿಚರ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಕೆಲ ದಿನಗಳ ಹಿಂದೆ ನವೀನ್ ವಿರುದ್ಧ ಕಳ್ಳತನದ ಆರೋಪ ಕೇಳಿ ಬಂದಿತ್ತು.
ಈ ಹಿನ್ನೆಲೆಯಲ್ಲಿ ನವೀನ್ ಮೇಲೆ ಸಿಟ್ಟಾಗಿದ್ದ ಅಂಗಡಿ ಮಾಲೀಕ ರಂಜಾನ್ ನದಾಫ್, ಆತನ ಮೊಬೈಲ್ ಕಸಿದುಕೊಂಡಿದ್ದನು. ನಂತರ, ಆರೋಪಿ ರಂಜಾನ್ ನದಾಫ್, ನವೀನ್ ಮತ್ತು ಶಿಲ್ಪಾರ ಚಾಟ್ ಮೆಸೆಜ್ಗಳನ್ನು ನೋಡಿದ್ದಾನೆ. ಬಳಿಕ, ನವೀನ್ ಮೊಬೈಲ್ನಲ್ಲಿದ್ದ ಶಿಲ್ಪಾ ನಂಬರ್ ಅನ್ನು ರಂಜಾನ್ ನದಾಫ್ ತೆಗೆದುಕೊಂಡಿದ್ದಾನೆ.
ಬಳಿಕ, ಶಿಲ್ಪಾಗೆ ಕರೆ ಮಾಡಿ ನವೀನ್ ನಿನಗೆ ದುಡ್ಡು ಕಳುಹಿಸಿದ್ದಾನೆ, ಆ ದುಡ್ಡು ಎಲ್ಲಿಂದ ಬಂತು? ನಮ್ಮ ಫರ್ನಿಚರ್ ಅಂಗಡಿಯಲ್ಲಿ ಕಳ್ಳತನ ಮಾಡಿ ನವೀನ್ ನಿನಗೆ ಹಣ ಕಳುಹಿಸಿದ್ದಾನೆ. ಇದನ್ನು ಬಹಿರಂಗ ಮಾಡುತ್ತೇನೆ, ನಿಮ್ಮ ತಂದೆ-ತಾಯಿಗೆ ಹೇಳುತ್ತೇನೆ ಎಂದು ರಂಜಾನ್ ನದಾಫ್ ಬ್ಲ್ಯಾಕ್ಮೇಲ್ ಮಾಡಿದ್ದಾನೆ ಎಂದು ಮೃತ ಶಿಲ್ಪಾ ಪ್ರಿಯಕರ ನವೀನ್ ಹೇಳಿದ್ದಾರೆ. ಬೆಳಗಾವಿಯ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ರಂಜಾನ್ ನದಾಫ್ ಬಂಧಿಸಲು ಮುತಾಲಿಕ್ ಆಗ್ರಹ
ಆರೋಪಿ ರಂಜಾನ್ ನದಾಫ್ನನ್ನು ಬಂಧಿಸಲು ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಆಗ್ರಹಿಸಿದ್ದಾರೆ. ಶಿಲ್ಪಾ ಮತ್ತು ನವೀನ್ ಪ್ರೀತಿಸುತ್ತಿದ್ದರು. ನವೀನ್ ಫರ್ನಿಚರ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದನು. ನವೀನ್ ಮನೆಯಲ್ಲಿ ಬಹಳ ಬಡತನ ಇತ್ತು. ಅವರ ತಾಯಿಗೆ ಔಷಧಿ ಕೊಡಿಸಬೇಕಿತ್ತು. ನವೀನ್ಗೆ ರಂಜಾನ್ ನದಾಫ್ ಸಂಬಳ ಕೊಟ್ಟಿಲ್ಲ. ಹೀಗಾಗಿ, ಅಂಗಡಿಯಲ್ಲಿ ಸ್ವಲ್ಪ ವಸ್ತು ಕಳ್ಳತನ ಮಾಡಿ ತಾಯಿಗೆ ಔಷಧಿ ಕೊಡಿಸಿದ್ದಾನೆ. ಅದಕ್ಕಾಗಿಯೇ ನವೀನ್ಗೆ ಹೊಡೆದು ಬಡೆದು ರಂಜಾನ್ ಪೊಲೀಸರಿಗೆ ದೂರು ನೀಡಿದ್ದಾರೆ. ನವೀನ್ ಮೊಬೈಲ್ ಕಸಿದುಕೊಂಡು ಅದರಲ್ಲಿನ ಶಿಲ್ಪಾ ನಂಬರ್ ತೆಗೆದುಕೊಂಡು ಕರೆ ಮಾಡಿ ಕಿರುಕುಳ ನೀಡಿದ್ದಾನೆ. ಇದರಿಂದ ಶಿಲ್ಪಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ರಂಜಾನ್ ನದಾಫ್ನನ್ನು ಒದ್ದು ಒಳಗೆ ಹಾಕಿ ಎಂದು ಪ್ರಮೋದ್ ಮುತಾಲಿಕ್ ಆಗ್ರಹಿಸಿದ್ದಾರೆ
