ಬಿಸಿಲಿಗೆ ತಂಪಾಗಿಸೋ ಪರಿಸರ ಸ್ನೇಹಿ ಮಡಕೆ ಏರ್ ಕೂಲರ್ ನೋಡಿದ್ದೀರಾ?

ಬೆಂಗಳೂರು : ಬೇಸಿಗೆಗಾಲ ಬಂತೆಂದರೆ ಸಾಕು, ಈ ಬಿಸಿಲಿನ ಝಳದಿಂದ ತಪ್ಪಿಸಿಕೊಳ್ಳಲು ನಾನಾ ರೀತಿಯ ಸಾಂಪ್ರದಾಯಿಕ ವಿಧಾನ ಗಳ ಮೊರೆ ಹೋಗುವುದನ್ನು ನೋಡಿರಬಹುದು. ಕೆಲವರು ಮಣ್ಣಿನ ಮಡಕೆ ಯಲ್ಲಿ ತುಂಬಿಸಿಟ್ಟ ನೀರನ್ನು ಹೆಚ್ಚು ಬಳಸುತ್ತಾರೆ. ಆದರೆ ನಿಮಗೇನಾದ್ರೂ ಮಣ್ಣಿನ ಮಡಕೆಯ ಏರ್ ಕೂಲರ್ಬಗ್ಗೆ ತಿಳಿದಿದೆಯೇ. ಇದು ಎಸಿ ಬದಲಾಗಿ ಬಳಸಬಹುದಾದ ಸಾಂಪ್ರದಾಯಿಕ ಹಾಗೂ ಪರಿಸರ ಸ್ನೇಹಿ ಆಯ್ಕೆ ಈ ಮಣ್ಣಿನ ಮಡಕೆ ಏರ್ ಕೂಲರ್ ಆಗಿದೆ. ಅಗ್ಗದ ಬೆಲೆಗೆ ಲಭ್ಯವಿರುವ ಮಣ್ಣಿನ ಮಡಕೆ ಏರ್ ಕೂಲರ್ ಗೆ ವಿದ್ಯುತ್ ಬೇಕಾಗಿಲ್ಲ. ಮಧ್ಯಮ ವರ್ಗದ ಜನರಿಗೂ ಇದು ಬೆಸ್ಟ್ ಆಯ್ಕೆಯಾಗಿದ್ದು, ಈಗಾಗಲೇ ಈ ಏರ್ ಕೂಲರ್ ಗೆ ಬಾರಿ ಬೇಡಿಕೆಯಿದೆ. ಆದರೆ ಹೆಚ್ಚಿನವರು ಏರ್ ಕೂಲರ್ ಗಳನ್ನೆ ಬಳಸುತ್ತಾರೆ. ಆರ್ಥಿಕವಾಗಿ ಸಶಕ್ತರಲ್ಲದವರು ಮಣ್ಣಿನ ಮಡಕೆ ಏರ್ ಕೂಲರ್ ಖರೀದಿಸಿ ಬೇಸಿಗೆಯಲ್ಲಿ ಬಿಸಿಲಿನ ಶಾಖದಲ್ಲಿ ಮುಕ್ತಿ ಪಡೆಯಬಹುದು.
ಹೌದು, ಹೆಸರೇ ಹೇಳುವಂತೆ ಮಣ್ಣಿನ ಮಡಕೆಯ ಏರ್ ಕೂಲರ್ ಜೇಡಿ ಮಣ್ಣಿನಿಂದ ತಯಾರಿಸಲಾಗಿದ್ದು, ವಿದ್ಯುತ್ ಬಳಸದೇ ನೈಸರ್ಗಿಕ ಹಾಗೂ ತಂಪಾದ ಗಾಳಿ ನೀಡುತ್ತದೆ. ಈ ಪರಿಸರ ಸ್ನೇಹಿ ಕೂಲರ್‌ಗಳು ವಿಭಿನ್ನ ಗಾತ್ರದ ಎರಡು ಮಣ್ಣಿನ ಮಡಕೆಗಳನ್ನು ಹೊಂದಿದ್ದು, ದೊಡ್ಡ ಮಡಕೆಯೊಳಗೆ ಚಿಕ್ಕ ಮಡಕೆಯನ್ನು ಇರಿಸಲಾಗುತ್ತದೆ. ಅವುಗಳ ನಡುವಿನ ಜಾಗದಲ್ಲಿ ಒದ್ದೆಯಾದ ಮರಳಿನಿಂದ ತುಂಬಿಸಲಾಗುತ್ತದೆ. ಅದರ ಮೇಲ್ಭಾಗದಲ್ಲಿ ಒದ್ದೆಯಾದ ಬಟ್ಟೆಯಿರುತ್ತದೆ. ಈ ಒದ್ದೆಯಾದ ಮರಳು ಮತ್ತು ಹೊರಗಿನ ಮಡಕೆಯಲ್ಲಿರುವ ನೀರು ಆವಿಯಾದಾಗ, ಬೀಸುವ ಗಾಳಿಯು ಕೂಡ ತಣ್ಣಗೆ ಇರುತ್ತದೆ. ಅತ್ಯುತ್ತಮ ವಸ್ತುಗಳಿಂದ ಮಾಡಲ್ಪಟ್ಟ ಈ ಮಣ್ಣಿನ ಮಡಕೆ ಏರ್ ಕೂಲರ್ ಗಳ ನಿರ್ವಹಣೆಯು ಸುಲಭದಾಯಕವಾಗಿದ್ದು ನೈಸರ್ಗಿಕವಾದ ತಣ್ಣನೆಯ ಗಾಳಿಯನ್ನು ಪಡೆಯಬಹುದು.
ಆರೋಗ್ಯಕ್ಕೆ ಯಾವುದೇ ಅಡ್ಡಪರಿಣಾಮಗಳಿಲ್ಲದೇ ಎಲ್ಲಾ ವರ್ಗದ ಜನರ ಕೈಗೆಟುಕುವ ದರಕ್ಕೆ ಈ ಪರಿಸರ ಸ್ನೇಹಿ ಏರ್ ಕೂಲರ್ ಲಭ್ಯವಿದೆ. ಅದಲ್ಲದೇ ಸಾಂಪ್ರದಾಯಿಕ ಕುಂಬಾರಿಕೆ ಕೌಶಲ್ಯಗಳ ಬಳಕೆಯನ್ನು ಪ್ರೋತ್ಸಾಹಿಸಿ, ಸ್ಥಳೀಯ ಕುಶಲಕರ್ಮಿಗಳನ್ನು ಬೆಂಬಲಿಸುವ ಮೂಲಕ ಸ್ಥಳೀಯ ಆರ್ಥಿಕತೆಗೆ ಕೊಡುಗೆ ನೀಡಿದಂತೆ ಆಗುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ.