ಹರಿದ್ವಾರದ ಹರ್ ಕಿ ಪೌರಿಯಲ್ಲಿ ತಿಲಕ ಹಚ್ಚುವ ವಿಚಾರಕ್ಕೆ ಮೂವರು ಮಹಿಳೆಯರ ಕಿತ್ತಾಟ; ವಿಡಿಯೋ ವೈರಲ್, ಪೊಲೀಸರಿಂದ ಎಚ್ಚರಿಕೆ

ಉತ್ತರಾಖಂಡ: ಯಾರ ನಡುವೆ ಜಗಳ ನಡೆದ್ರೂ ತಡೆಯಬಹುದು, ಆದರೆ ಈ ಮಹಿಳೆಯರ (woman) ನಡುವೆ ಜಗಳಗಳು ಶುರುವಾದ್ರೆ ನಿಲ್ಲಿಸೋದು ತುಂಬಾನೇ ಕಷ್ಟ. ಸಣ್ಣ ಪುಟ್ಟ ವಿಷ್ಯಕ್ಕೆ ಈ ಹೆಣ್ಮಕ್ಕಳು ಎಲ್ಲೆಂದರಲ್ಲಿ ಕಿತ್ತಾಡಿಕೊಳ್ಳುವ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಇದೀಗ ಇಂತಹದ್ದೇ ಘಟನೆಯೂ ಉತ್ತರಾಖಂಡದ ಹರಿದ್ವಾರದ ಪ್ರಸಿದ್ಧ ಹರ್ ಕಿ ಪೌರಿ (Hari Ki Pauri in Haridwar) ಪ್ರದೇಶದಲ್ಲಿ ನಡೆದಿದೆ. ಭಕ್ತರಿಗೆ ತಿಲಕ ಇಡುವ ವಿಚಾರವಾಗಿ ಮೂವರು ಮಹಿಳೆಯರು ಕಿತ್ತಾಡಿಕೊಂಡಿದ್ದಾರೆ. ಈ ಘಟನೆಯ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಅಜಿತ್ ಸಿಂಗ್ ರಾತಿ (Ajith Singh Rathi) ಹೆಸರಿನ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಮಹಿಳೆಯರು ಭಕ್ತರಿಗೆ ತಿಲಕ ಹಚ್ಚುವ ವಿಚಾರವಾಗಿ ಕಿತ್ತಾಡಿಕೊಳ್ಳುತ್ತಿರುವುದನ್ನು ಕಾಣಬಹುದು. ಒಬ್ಬರ ಮೇಲೆ ಒಬ್ಬರು ಬಿದ್ದುಕೊಂಡು, ಜಡೆ ಹಿಡಿದು ಎಳೆದಾಡಿಕೊಳ್ಳುತ್ತಿರುವುದನ್ನು ನೋಡಬಹುದು. ಸ್ಥಳೀಯರು ಮಧ್ಯಪ್ರವೇಶಿಸಿ ಈ ಮೂವರು ಮಹಿಳೆಯರು ಕಿತ್ತಾಡುವುದನ್ನು ನಿಲ್ಲಿಸಿದ್ದಾರೆ. ಮಹಿಳೆಯರ ಕಿತ್ತಾಟದ ದೃಶ್ಯವನ್ನು ದಾರಿಹೋಕರು ಮೊಬೈಲ್ ಫೋನ್‌ಗಳಲ್ಲಿ ರೆಕಾರ್ಡ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಈ ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ತಕ್ಷಣ ಸ್ಥಳಕ್ಕೆ ಆಗಮಿಸಿ ಮೂವರು ಮಹಿಳೆಯರನ್ನು ವಶಕ್ಕೆ ಪಡೆದು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ವಿಚಾರಣೆ ನಡೆಸಿದಾಗ, ಮೂವರು ಮಹಿಳೆಯರು ಹರ್ ಕಿ ಪೌರಿ ಮತ್ತು ಸುತ್ತಮುತ್ತಲಿನ ಘಾಟ್‌ಗಳಿಗೆ ಭೇಟಿ ನೀಡುವ ಯಾತ್ರಾರ್ಥಿಗಳಿಗೆ ತಿಲಕ ಹಚ್ಚಿ ಅವರಿಂದ ಹಣವನ್ನು ಸುಲಿಗೆ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಬುಧವಾರ, ಮೊದಲು ತಿಲಕ ಯಾರು ಹಚ್ಚಬೇಕೆಂಬ ಬಗ್ಗೆ ಈ ಮೂವರು ಮಹಿಳೆಯರ ವಾಗ್ವಾದ ನಡೆದು ಕೊನೆಗೆ ಹೊಡೆದಾಟಕ್ಕೂ ಕಾರಣವಾಯಿತು ಎನ್ನಲಾಗಿದೆ.
ಕೊತ್ವಾಲಿ ನಗರ ಉಸ್ತುವಾರಿ ರಿತೇಶ್ ಶಾ ಅವರು ಈ ಮೂವರು ಮಹಿಳೆಯರನ್ನು ಗುರುತಿಸಲಾಗಿದೆ ಎಂದು ತಿಳಿಸಿದ್ದಾರೆ. ಇನ್ನು ಪೊಲೀಸರು ಈ ಮಹಿಳೆಯರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದು, ಈ ರೀತಿ ವರ್ತಿಸದಂತೆ ಎಚ್ಚರಿಕೆ ನೀಡಿದ್ದಾರೆ. ಪೊಲೀಸ್ ಕಾಯ್ದೆಯ ಸೆಕ್ಷನ್ 81 ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಧಾರ್ಮಿಕ ಸ್ಥಳದಲ್ಲಿ ಅಶಿಸ್ತು ಅಥವಾ ಭಕ್ತರೊಂದಿಗಿನ ಅಹಿತಕರ ನಡವಳಿಕೆಯನ್ನು ಯಾವುದೇ ಸಂದರ್ಭದಲ್ಲೂ ಸಹಿಸಲಾಗುವುದಿಲ್ಲ ಎಂದು ಹೇಳಿದ್ದಾರೆ.
ಹರ್ ಕಿ ಪೌರಿಯಂತಹ ಧಾರ್ಮಿಕ ಹಾಗೂ ಮಹತ್ವದ ಸ್ಥಳದ ಘನತೆಯನ್ನು ಕಾಪಾಡಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಪ್ರಸ್ತುತ, ಮೂವರು ಮಹಿಳೆಯರು ತಮ್ಮ ತಪ್ಪನ್ನು ಒಪ್ಪಿಕೊಂಡು ಕ್ಷಮೆಯಾಚಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇಂತಹ ಘಟನೆಗಳು ಮತ್ತೆ ಸಂಭವಿಸದಂತೆ ತಡೆಯಲು ಪೊಲೀಸರು ಈ ಪ್ರದೇಶದಲ್ಲಿ ಹೆಚ್ಚಿನ ಕಣ್ಗಾವಲು ಇರಿಸಿದ್ದಾರೆ
ಅಕ್ಟೋಬರ್ 30 ರಂದು ಹಂಚಿಕೊಳ್ಳಲಾದ ಈ ವಿಡಿಯೋ ಇದುವರೆಗೂ ಎರಡು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ನಮ್ಮ ಜನರೇ ಎಲ್ಲಿ ಹೇಗೆ ವರ್ತಿಸಬೇಕು ಎನ್ನುವುದು ತಿಳಿದೇ ಇಲ್ಲ ಎಂದಿದ್ದಾರೆ. ಇನ್ನೊಬ್ಬರು, ಭಕ್ತಿಯ ಜೊತೆಗೆ ವ್ಯವಸ್ಥೆಗಳು ಅತ್ಯಗತ್ಯ. ಸರ್ಕಾರವು ಹರ್ ಕಿ ಪೌರಿಯ ಡಿಜಿಟಲ್ ನಿರ್ವಹಣೆ ಮತ್ತು ಮಹಿಳಾ ಸ್ವಯಂಸೇವಕರ ನಿಯೋಜನೆಯ ಬಗ್ಗೆ ಕೆಲಸ ಮಾಡುತ್ತಿದೆ. ಹರಿದ್ವಾರದ ಘನತೆಯನ್ನು ಕೇವಲ ಮಾತಿನ ಮೂಲಕವಲ್ಲ, ಕೆಲಸದ ಮೂಲಕ ಕಾಪಾಡಿಕೊಳ್ಳಲಾಗುವುದು ಎಂದಿದ್ದಾರೆ. ಶ್ರದ್ಧಾ ಭಕ್ತಿಯ ಕೇಂದ್ರಗಳಲ್ಲಿ ಇಂತಹ ಜಗಳಗಳು ಯಾಕಾಗಿ ಎಂದು ಮತ್ತೊಬ್ಬ ಬಳಕೆದಾರ ಪ್ರಶ್ನೆ ಮಾಡಿದ್ದಾರೆ.