ಪುತ್ತೂರು ಬಸ್‌ನಲ್ಲಿ ಯುವತಿಗೆ ಕಿರುಕುಳ, ಆರೋಪಿ ಪೊಲೀಸರ ವಶಕ್ಕೆ

ಪುತ್ತೂರು: ಸರಕಾರಿ ಬಸ್ ನಲ್ಲಿ ಯುವತಿಯೊಬ್ಬಳಿಗೆ ಕಿರುಕುಳ ನೀಡಿದ ಯುವಕನನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಪುತ್ತೂರಿನಲ್ಲಿ ನಡೆದಿದೆ. ಆರೋಪಿಯನ್ನು ಮಂಗಳೂರಿನ ತೌಹೀದ್ ಎಂದು ಗುರುತಿಸಲಾಗಿದೆ.

ಮಂಗಳೂರಿನಿಂದ ಪುತ್ತೂರು ಕಡೆಗೆ ತೆರಳುತ್ತಿದ್ದ ಬಸ್ಸು ಸಂಜೆ ಸುಮಾರು 6:30 ಗಂಟೆಗೆ ಬಂಟ್ವಾಳ ತಾಲೂಕಿನ ಮಾಣಿ ಬಳಿ ತಲುಪಿದಾಗ ಆರೋಪಿಯು ತನ್ನ ಪಕ್ಕದಲ್ಲಿ ಕುಳಿತಿದ್ದ ವಿದ್ಯಾರ್ಥಿನಿ ಜೊತೆಗೆ ಅನುಚಿತವಾಗಿ ವರ್ತಿಸಿದ್ದಾನೆ ಎನ್ನಲಾಗಿದೆ. ಈ ವಿಚಾರವನ್ನು ವಿದ್ಯಾರ್ಥಿನಿ ತಂದೆಗೆ ಪೋನ್ ಮುಖಾಂತರ ತಿಳಿಸಿದ್ದಾಳೆ. ಬಸ್ ಪುತ್ತೂರು ಕೆಎಸ್ಸಾರ್ಟಿಸಿ ಬಸ್ ನಿಲ್ದಾಣಕ್ಕೆ ತಲುಪಿದಾಗ ಆರೋಪಿಯು ಬಸ್ಸಿನ ತುರ್ತು ನಿರ್ಗಮನ ಕಿಟಕಿಯ ಮೂಲಕ ಹಾರಲು ಪ್ರಯತ್ನಿಸಿದಾಗ ವಿದ್ಯಾರ್ಥಿನಿಯ ತಂದೆ ಮತ್ತು ಸಾರ್ವಜನಿಕ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ.
ಈ ಘಟನೆಯ ಕುರಿತು ಮಾಹಿತಿ ತಿಳಿದು, ಹಿಂದೂ ಸಂಘಟನೆಗಳು ಪುತ್ತೂರು ಮಹಿಳಾ ಠಾಣೆಯ ಮುಂದೆ ಜಮಾಯಿಸಿ, ಆರೋಪಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಇಂತಹ ಘಟನೆಗಳು ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ಹೆಚ್ಚಾಗುತ್ತಿರುವುದು ಆತಂಕಕಾರಿಯಾಗಿದೆ ಎಂದು ಹಿಂದೂಪರ ಮುಖಂಡರು ಆರೋಪಿಸಿದ್ದಾರೆ. ಈ ಬಗ್ಗೆ ಪಿರ್ಯಾದಿದಾರರು ನೀಡಿದ ದೂರಿನಂತೆ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಅ.ಕ್ರ: 56/2025 ಕಲಂ: 75 BNS 2023 ರಂತೆ ಪ್ರಕರಣ ದಾಖಾಲಿಸಿಕೊಂಡು ಆರೋಪಿಯನ್ನು ಪೊಲೀಸ್ ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ.
