ಜಿಎಸ್‌ಟಿ ದರ ಇಳಿಕೆ ಆತಂಕ:ಕೇಂದ್ರವೇ ಭರಿಸಲಿ ಒತ್ತಾಯಕ್ಕೆ 8 ರಾಜ್ಯಗಳ ಒಮ್ಮತ

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ಜಿಎಸ್‌ಟಿ ಸ್ಲ್ಯಾಬ್ಗಳ ಇಳಿಕೆ ಸೇರಿದಂತೆ ಸುಧಾರಣಾ ಕ್ರಮಗಳಿಂದ ರಾಜ್ಯ ಸರ್ಕಾರಗಳಿಗೆ ಆದಾಯ ಕುಸಿತ ಆಗಬಹುದು ಎಂದು ಎಂಟು ರಾಜ್ಯಗಳು ಆತಂಕ ವ್ಯಕ್ತಪಡಿಸಿವೆ. ಕರ್ನಾಟಕದ ಸಚಿವ ಕೃಷ್ಣ ಬೈರೇಗೌಡ ನೇತೃತ್ವದಲ್ಲಿ ಇಂದು ಶುಕ್ರವಾರ ನಡೆದ ಸಭೆಯಲ್ಲಿ ಎಂಟು ರಾಜ್ಯಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಈ ವೇಳೆ, ಜಿಎಸ್‌ಟಿ ದರ ಇಳಿಕೆಯಿಂದ ರಾಜ್ಯಗಳ ಆದಾಯ ಕುಂಠಿತಗೊಳ್ಳಬಹುದು ಎಂದು ಎಲ್ಲರೂ ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ರಾಜ್ಯಗಳಿಗೆ ಆಗಬಹುದಾದ ನಷ್ಟವನ್ನು ಕೇಂದ್ರವು ಭರಿಸಬೇಕೆಂದು ಇವು ಒತ್ತಾಯಿಸಿವೆ.

ದೇಶದಲ್ಲಿ ವಿಪಕ್ಷಗಳು ಆಡಳಿತದಲ್ಲಿರುವ ಕರ್ನಾಟಕ, ತಮಿಳುನಾಡು, ತೆಲಂಗಾಣ, ಕೇರಳ, ಹಿಮಾಚಲಪ್ರದೇಶ, ಜಾರ್ಖಂಡ್, ಪಂಜಾಬ್ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳ ಹಣಕಾಸು ಸಚಿವರು ನಡೆಸಿದ ಸಭೆಯಲ್ಲಿ ಈ ಬಗ್ಗೆ ಚರ್ಚೆಗಳಾಗಿವೆ. ಕೃಷ್ಣಬೈರೇಗೌಡರ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ ಆದ ತೀರ್ಮಾನವನ್ನು ಸೆಪ್ಟೆಂಬರ್ 3 ಮತ್ತು 4ರಂದು ನಡೆಯುವ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಪ್ರಸ್ತಾಪ ಮಾಡಲು ನಿರ್ಧರಿಸಲಾಯಿತು.
ಜಿಎಸ್‌ಟಿ ದರ ಇಳಿಕೆಯಿಂದ ರಾಜ್ಯಗಳಿಗೆ 2 ಲಕ್ಷ ಕೋಟಿ ರೂ ನಷ್ಟ?
ಕೇಂದ್ರ ಸರ್ಕಾರವು ಈಗಿರುವ ಶೇ. 5, ಶೇ. 12, ಶೇ. 18 ಮತ್ತು ಶೇ. 28ರ ಜಿಎಸ್‌ಟಿ ಸ್ಲ್ಯಾಬ್ಗಳ ಬದಲು ಶೇ. 5 ಮತ್ತು ಶೇ. 18 ಈ ಎರಡು ಸ್ಲ್ಯಾಬ್ಗಳನ್ನಷ್ಟೇ ಇಟ್ಟುಕೊಳ್ಳಲು ನಿರ್ಧರಿಸಿದೆ. ಶೇ. 12 ಮತ್ತು ಶೇ. 28ರ ಸ್ಲ್ಯಾಬ್ಗಳು ಇರುವುದಿಲ್ಲ. ಶೇ. 12ರ ಸ್ಲ್ಯಾಬ್ನಲ್ಲಿದ್ದ ಸರಕುಗಳಿಗೆ ಜಿಎಸ್ಟಿಯನ್ನು ಶೇ. 5ಕ್ಕೆ ಇಳಿಸಲಾಗುತ್ತದೆ. ಶೇ. 28ರ ದರವನ್ನು ಶೇ. 18ಕ್ಕೆ ಇಳಿಸಲು ಸರ್ಕಾರ ಪ್ರಸ್ತಾಪಿಸಿದೆ.
ಈ ಜಿಎಸ್‌ಟಿ ದರ ಇಳಿಕೆಯಿಂದ ರಾಜ್ಯ ಸರ್ಕಾರಗಳಿಗೆ ಒಂದೂವರೆಯಿಂದ ಎರಡು ಲಕ್ಷ ಕೋಟಿ ರೂನಷ್ಟು ಆದಾಯನಷ್ಟ ಆಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ರಾಜ್ಯಗಳಿಗೆ ಆಗಲಿರುವ ಈ ಸಂಭಾವ್ಯ ಆದಾಯ ನಷ್ಟವನ್ನು ಕೇಂದ್ರ ಸರ್ಕಾರ ಐದು ವರ್ಷಗಳವರೆಗೆ ಭರಿಸಬೇಕು ಎಂದು ಒತ್ತಾಯಿಸಲು ಇಂದಿನ ಸಭೆಯಲ್ಲಿ ಒಮ್ಮತದಿಂದ ನಿರ್ಧರಿಸಲಾಗಿದೆ
ರಾಜ್ಯಗಳಿಗೆ ಆದಾಯ ನಷ್ಟವಾದರೆ ಜನರಿಗೆ ಕಷ್ಟ
ಜಿಎಸ್‌ಟಿ ದರ ಇಳಿಕೆಯಿಂದ ರಾಜ್ಯಗಳ ಆದಾಯಕ್ಕೆ ಶೇ. 15ರಿಂದ 20ರಷ್ಟು ನಷ್ಟ ಆಗಬಹುದು. ರಾಜ್ಯಗಳಿಗೆ ಇಷ್ಟು ದೊಡ್ಡ ನಷ್ಟವಾದರೆ ಸರ್ಕಾರದ ಹಣಕಾಸು ಸ್ಥಿರತೆಗೆ ಧಕ್ಕೆಯಾಗುತ್ತದೆ. ಜಿಎಸ್‌ಟಿ ಇಳಿಕೆಯು ರಾಜ್ಯಗಳ ಆದಾಯವನ್ನು ಕಡಿಮೆಗೊಳಿಸಬಾರದು. ಇದರಿಂದ ರಾಜ್ಯಗಳಲ್ಲಿ ಜನಕಲ್ಯಾಣ ಯೋಜನೆಗಳು ಹಾಗೂ ಮೂಲಭೂತ ಸೌಕರ್ಯ ಯೋಜನೆಗಳಿಗೆ ಬಂಡವಾಳ ಕೊರತೆ ಆಗುತ್ತದೆ ಎಂದು ಇಂದಿನ ಸಭೆಯಲ್ಲಿ ಎಂಟು ರಾಜ್ಯಗಳ ಹಣಕಾಸು ಸಚಿವರು ಆತಂಕ ತೋಡಿಕೊಂಡಿದ್ದಾರೆ.
ಸೆಪ್ಟೆಂಬರ್ 3 ಮತ್ತು 4ಕ್ಕೆ ಜಿಎಸ್‌ಟಿ ಕೌನ್ಸಿಲ್ ಸಭೆ ನಡೆಯಲಿದ್ದು, ಈ ಎಂಟು ರಾಜ್ಯಗಳ ಅಭಿಪ್ರಾಯಗಳನ್ನು ಕ್ರೋಢೀಕರಿಸಿ ಆ ಸಭೆಯಲ್ಲಿ ಪ್ರಸ್ತುತಪಡಿಸಲಾಗುತ್ತದೆ.
