ಹುಬ್ಬಳ್ಳಿಯಲ್ಲಿ ದಾರುಣ ಘಟನೆ: ಚಿನ್ನ ಮತ್ತು ಸೈಟ್‌ಗಾಗಿ ಹೆತ್ತ ತಾಯಿಯನ್ನೇ ಕೊಲೆ ಮಾಡಿದ ನಿವೃತ್ತ ಪಾಲಿಕೆ ನೌಕರ

ಹುಬ್ಬಳ್ಳಿ: ಆ ತಾಯಿ ಇದ್ದೊಬ್ಬ ಮಗನನ್ನು ಚೆನ್ನಾಗಿ ಬೆಳಸಿದ್ದರು. ಅಕ್ಕರೆಯಿಂದ ಆರೈಕೆ ಮಾಡಿ ಸಕ್ಕರೆಯಂತ ಜೀವನ ಕಟ್ಟಿಕೊಳ್ಳಲು ಹಗಲಿರಳು ಶ್ರಮಿಸಿದ್ದರು. ಆದರೆ ಮಹಾತಾಯಿಯನ್ನೇ ಮಗ ಕೊಲೆ ಮಾಡಿರುವಂತಹ ದಾರುಣ ಘಟನೆಯೊಂದು ನಗರದ ಬ್ರಹ್ಮಗಿರಿ ಕಾಲೋನಿಯಲ್ಲಿ ಬುಧವಾರ ನಡೆದಿದೆ. ಹುಬ್ಬಳ್ಳಿ-ಧಾರವಾಡ ಪಾಲಿಕೆಯ ನಿವೃತ್ತ ನೌಕರ ಅಶೋಕ್ ಕೊಲೆಗೈದ ಮಗ. ನಿಂಗವ್ವ ಮುಳಗುಂದ(78) ಕೊಲೆಯಾದ ತಾಯಿ. ಕೊಲೆ ಬಳಿಕ ಅಶೋಕ್ ತಾವೇ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಆದರೆ ಅನುಮಾನ ಬಂದು ಪೊಲೀಸರು ವಿಚಾರಿಸಿದಾಗ ಅಸಲಿ ಸತ್ಯ ಗೊತ್ತಾಗಿದ್ದು, ಸದ್ಯ ಅಶೋಕ್ ಅರೆಸ್ಟ್ ಆಗಿದ್ದಾರೆ.

ಹುಬ್ಬಳ್ಳಿ ನಗರದ ಬ್ರಹ್ಮಗಿರಿ ಕಾಲೋನಿಯಲ್ಲಿ ನಿಂಗವ್ವ ಮುಳಗುಂದ ವಾಸವಾಗಿದ್ದರು. ನವೆಂಬರ್ 4 ರಂದು ತಮ್ಮ ಮನೆಯಲ್ಲಿ ಮಲಗಿದ್ದರು. ನಿಂಗವ್ವ ಅವರ ಪತಿ ಮಲ್ಲಪ್ಪ ಮನೆಯ ಹೊರಗಡೆ ಮಲಗಿದ್ದರು. ಆದರೆ ರಾತ್ರಿ ಸಮಯದಲ್ಲಿ ಹಿಂಬಾಗಿಲ ಮೂಲಕ ಮನೆಯೊಳಗೆ ಆಗಮಿಸಿ ನಿಂಗವ್ವರನ್ನು ಕೊಲೆ ಮಾಡಲಾಗಿತ್ತು. ಇತ್ತ ಬೆಳಗ್ಗೆ ಮನೆಗೆ ಬಂದಿದ್ದ ಅಶೋಕ್, ತನ್ನ ತಾಯಿಯನ್ನು ಯಾರೋ ಕೊಲೆ ಮಾಡಿ ಪರಾರಿಯಾಗಿದ್ದಾರೆ ಎಂದು ವಿದ್ಯಾನಗರ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದರು.
ವಿದ್ಯಾನಗರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಮಾಡಿದ್ದಾರೆ. ನಂತರ ಶ್ವಾನದಳ, ಬೆರಳಚ್ಚು ತಜ್ಞರು, ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ಕೂಡ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಮೊದಲಿಗೆ ಯಾರೋ ದುಷ್ಕರ್ಮಿಗಳು ಹಿಂಬಾಗಿಲ ಮೂಲಕ ಬಂದು ವೃದ್ದೆಯ ಕೊಲೆ ಮಾಡಿ ಹೋಗಿದ್ದಾರೆ ಎಂದು ಶಂಕಿಸಲಾಗಿತ್ತು. ಆದರೆ ವಿಚಾರಣೆ ವೇಳೆ ಕೊಲೆ ಮಾಡಿದ ಆರೋಪಿ ಬಗ್ಗೆ ತಿಳಿದು ಸ್ವತಃ ಪೊಲೀಸರೇ ಶಾಕ್ ಆಗಿದ್ದಾರೆ. ಏಕೆಂದರೆ ನಿಂಗವ್ವರನ್ನು ಕೊಲೆ ಮಾಡಿದ್ದು, ಬೇರಾರೂ ಅಲ್ಲಾ, ಹೆತ್ತು ಹೊತ್ತು ಸಾಕಿ ಸಲುಹಿದ್ದ ಪುತ್ರ.
ಸಹೋದರನ ಮೇಲೆ ಅನುಮಾನ
ಅಶೋಕ್ ತಾಯಿಯನ್ನು ಕೊಂದು ಬಳಿಕ ತಾವೇ ಪೊಲೀಸರಿಗೆ ಮಾಹಿತಿ ನೀಡಿದ್ದರು. ಆರಂಭದಲ್ಲಿ ಪೊಲೀಸರು ಕೂಡ ಯಾರೋ ಕೊಲೆ ಮಾಡಿರಬಹುದು ಅಂತ ಅಂದುಕೊಂಡಿದ್ದರು. ಆದರೆ ನಿಂಗವ್ವ ಅವರ ಹೆಣ್ಣು ಮಕ್ಕಳು ಸ್ವತಃ ಸಹೋದರನ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆ ಪೊಲೀಸರು ಅಶೋಕ್ರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದರು. ಈ ವೇಳೆ ಮಗನೇ ತಾಯಿಯನ್ನು ಕೊಲೆ ಮಾಡಿರುವ ಅಸಲಿ ವಿಚಾರ ಗೊತ್ತಾಗಿದೆ.
ಕೊಲೆಗೆ ಚಿನ್ನ, ಸೈಟ್ ಕಾರಣ
ಚಿನ್ನ ಮತ್ತು ಸೈಟ್ ವಿಚಾರವೇ ನಿಂಗವ್ವ ಅವರ ಕೊಲೆಗೆ ಕಾರಣ. ನಿಂಗವ್ವ ಅವರಿಗೆ ನಾಲ್ವರು ಹೆಣ್ಣು ಮಕ್ಕಳು ಮತ್ತು ಓರ್ವ ಗಂಡು ಮಗ. ಅಶೋಕ್ ಹೊಸ ಮನೆ ಕಟ್ಟಿಸಿಕೊಂಡು ವಾಸವಾಗಿದ್ದರು. ನಿಂಗವ್ವ ಮತ್ತು ಪತಿ ಹೇಗೋ ಜೀವನ ಸಾಗಿದ್ದರು. ಹೆತ್ತವರ ಕಾಳಜಿ ಮಾಡದ ಅಶೋಕ್, ತನ್ನ ತಾಯಿಯಿ ಮೈಮೇಲಿದ್ದ ಬಂಗಾರಕ್ಕೆ ಮಾತ್ರ ಆಸೆ ಪಟ್ಟಿದ್ದರಂತೆ.
ವರ್ಷದ ಹಿಂದೆ ನಿಂಗವ್ವ ಅವರು ತಮ್ಮ ಮೈಮೇಲಿದ್ದ 30 ಗ್ರಾಂ ಬಂಗಾರವನ್ನು ತನ್ನ ಹೆಣ್ಣು ಮಕ್ಕಳಿಗೆ ನೀಡಿದ್ದರಂತೆ. ಹೀಗಾಗಿ ಅಶೋಕ್ ಹಿಂಸೆ ನೀಡುತ್ತಿದ್ದರಂತೆ. ಬಂಗಾರ ಕೊಟ್ಟವರ ಮನೆಯಲ್ಲಿಯೇ ಹೋಗಿ ನೀನು ಇರುವಂತೆ ತಾಯಿಗೆ ಹೇಳುತ್ತಿದ್ದರಂತೆ. ಆಗಾಗ ಹಲ್ಲೆ ಮಾಡಿ, ಧಮ್ಕಿ ಹಾಕಿ ಕೂಡ ಹಾಕುತ್ತಿದ್ದರು ಎನ್ನಲಾಗಿದೆ.
ಇನ್ನು ನಿಂಗವ್ವ ಅವರು ಸೈಟ್‌ವೊಂದನ್ನು ಕೂಡ ಹೆಣ್ಣು ಮಕ್ಕಳಿಗೆ ನೀಡಲು ಮುಂದಾಗಿದ್ದು, ಇದು ಅಶೋಕ್ ಆಕ್ರೋಶಕ್ಕೆ ಕಾರಣವಾಗಿತ್ತು. ಹೀಗಾಗಿ ನಿಂಗವ್ವರನ್ನು ಮನೆಯಲ್ಲಿ ಕೂಡಿ ಹಾಕಿ, ಬೀಗ ಹಾಕಿಕೊಂಡು ಹೋಗಿದ್ದರಂತೆ. ರಾತ್ರಿ ಮನೆಗೆ ಬಂದ ಅಶೋಕ್, ಕಟ್ಟಿಗೆ ಮಣೆಯಿಂದ ಹೊಡೆದು ನಿಂಗವ್ವರನ್ನು ಕೊಲೆ ಮಾಡಿ ಹೋಗಿದ್ದಾರೆ. ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕಿದ್ದ ಮಗ ಕೊಲೆ ಮಾಡಿ ಇದೀಗ ಜೈಲು ಸೇರಿದ್ದಾರೆ.