ಮಂಗಳೂರು ಕಂಬಳಕ್ಕೆ ಅದ್ಧೂರಿ ಚಾಲನೆ

ಮಂಗಳೂರು: ನಗರದ ಬಂಗ್ರಕೂಳೂರಿನ ಗೋಲ್ಡ್ ಪಿಂಚ್ ಸಿಟಿ ಆವರಣದ ‘ರಾಮ-ಲಕ್ಷ್ಮಣ’ ಜೋಡುಕರೆ ಕಂಬಳ ಕ್ಷೇತ್ರದಲ್ಲಿ ಶನಿವಾರ ಬೆಳಗ್ಗೆ 9ನೇ ವರ್ಷದ ‘ಮಂಗಳೂರು ಕಂಬಳ’ಕ್ಕೆ ಅದ್ಧೂರಿ ಚಾಲನೆ ನೀಡಲಾಯಿತು.


ಕಂಬಳ ಸಮಿತಿಯ ಗೌರವಾಧ್ಯಕ್ಷ ಮತ್ತು ಗೋಲ್ಡ್ ಫಿಂಚ್ ಸಿಟಿಯ ಮಾಲಕ ಕೆ. ಪ್ರಕಾಶ್ ಶೆಟ್ಟಿ ಅವರ ಉಪಸ್ಥಿತಿಯಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ಕಂಬಳಕ್ಕೆ ಚಾಲನೆ ದೊರೆಯಿತು. ಕಂಬಳದ ಕರೆಯನ್ನು ಪೂಜಿಸಿ, ಕೋಣಗಳನ್ನು ಕೆರೆಗೆ ಇಳಿಸುವ ಮೂಲಕ ಸ್ಪರ್ಧೆಗಳನ್ನು ಆರಂಭಿಸಲಾಯಿತು.

ಈ ಕಂಬಳದಲ್ಲಿ ಅವಿಭಜಿತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ನೂರಾರು ಜೋಡಿ ಕೋಣಗಳು ಭಾಗವಹಿಸುವ ನಿರೀಕ್ಷೆಯಿದೆ. ಕನೆಹಲಗೆ, ಅಡ್ಡಹಲಗೆ, ಹಿರಿಯ ಹಗ್ಗ, ಕಿರಿಯ ಹಗ್ಗ, ಹಿರಿಯ ನೇಗಿಲು ಹಾಗೂ ಕಿರಿಯ ನೇಗಿಲು ಎಂಬ ವಿವಿಧ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ಕಂಬಳ ವೀಕ್ಷಿಸಲು ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸುತ್ತಿದ್ದು, ಬಂಗ್ರಕೂಳೂರು ಆವರಣದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ.
ರಾತ್ರಿ ಇಡೀ ಸ್ಪರ್ಧೆಗಳು ನಡೆಯಲಿದ್ದು, ವಿಜೇತ ಕೋಣಗಳ ಮಾಲಕರಿಗೆ ಮತ್ತು ಓಟಗಾರರಿಗೆ ಆಕರ್ಷಕ ಬಹುಮಾನಗಳನ್ನು ವಿತರಿಸಲಾಗುವುದು ಎಂದು ಸಮಿತಿ ತಿಳಿಸಿದೆ.