ಕೆಲಸದ ಅವಧಿ 9 ರಿಂದ 10 ಗಂಟೆಗೆ ಹೆಚ್ಚಳಕ್ಕೆ ಸರ್ಕಾರದ ಚಿಂತನೆಗೆ ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಒಕ್ಕೂಟದಿಂದ ತೀವ್ರ ವಿರೋಧ

ಮಂಗಳೂರು : ಕಾರ್ಮಿಕರ ದುಡಿಯುವ ಅವಧಿಯನ್ನು ಹಾಲಿ ಇರುವ ಎಂಟು ಗಂಟೆಯಿಂದ ಹತ್ತು ಗಂಟೆಗೆ ಹೆಚ್ಚಿಸಿ, ವಾರದಲ್ಲಿ ಎರಡು ದಿನ ರಜೆ ನೀಡುವ ಕುರಿತ ಪ್ರಸ್ತಾಪಕ್ಕೆ ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಒಕ್ಕೂಟದಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ಕಾರ್ಮಿಕರಿಗೆ ಪ್ರಸ್ತುತ ಇರುವ ದಿನದಲ್ಲಿ 8 ಗಂಟೆಗಳ ಕೆಲಸದ ಅವಧಿಯನ್ನು 10 ಗಂಟೆಗಳಿಗೆ ಹೆಚ್ಚಿಸಿ ಶನಿವಾರ ಮತ್ತು ಭಾನುವಾರ ವಾರ ಎರಡು ದಿನ ರಜೆ ನೀಡುವುದು. ಇದಕ್ಕಾಗಿ ಕೇಂದ್ರ ಕಾರ್ಮಿಕ ಕಾಯ್ದೆಗೆ ಪೂರಕವಾಗಿ ರಾಜ್ಯದ ಅಂಗಡಿ ಮತ್ತು ವಾಣಿಜ್ಯಸ್ಥಾಪನೆ (ಶಾಪ್ ಆ್ಯಂಡ್ ಎಸ್ಟಾಬ್ಲಿಷ್ಮೆಂಟ್ ಆಕ್ಟ್) ಕಾಯಿದೆಗೆ ತಿದ್ದುಪಡಿ ತರಲು ಕಾರ್ಮಿಕ ಇಲಾಖೆ ಮುಂದಾಗಿದೆ.

ಸದ್ಯ ಕರ್ನಾಟಕ ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆ 1961ರ ಸೆಕ್ಷನ್ 7ರ ಪ್ರಕಾರ ಕೆಲಸದ ಅವಧಿ ದಿನಕ್ಕೆ 9 ಗಂಟೆ ಮೀರಬಾರದು ಮತ್ತು ಗರಿಷ್ಠ ಒಟಿ 10 ಗಂಟೆಗಳನ್ನು ಮೀರಬಾರದು ಎಂಬ ನಿಯಮ ಇದೆ. ಆದರೆ ಇದೀಗ ಕಾಯ್ದೆ ತಿದ್ದುಪಡಿ ಮಾಡುವ ಮೂಲಕ ಕೆಲಸದ ಅವಧಿಯನ್ನ ದಿನಕ್ಕೆ ಗರಿಷ್ಠ 10 ಗಂಟೆ ಮತ್ತು ಹೆಚ್ಚುವರಿ ಕೆಲಸದ ಅವಧಿಯನ್ನು ದಿನಕ್ಕೆ ಗರಿಷ್ಠ 12 ಗಂಟೆಗಳಿಗೆ ವಿಸ್ತರಿಸಲು ಚಿಂತನೆ ನಡೆದಿದೆ.ರಾಜ್ಯ ಸರ್ಕಾರದ ಈ ಚಿಂತನೆಗೆ ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಒಕ್ಕೂಟದ ಸಂಸ್ಥಾಪಕರಾದ ರಾಜೇಶ್ ಪವಿತ್ರನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.