ಟ್ಯಾಟೂ ಪ್ರಿಯರಿಗೆ ಸರ್ಕಾರದ ಕಟ್ಟೆಚ್ಚರ: ಆರೋಗ್ಯ ತಪಾಸಣೆ ಕಡ್ಡಾಯ, ಹೊಸ ನಿಯಮ ಶೀಘ್ರದಲ್ಲೇ

ಮಂಗಳೂರು/ಬೆಂಗಳೂರು : ಈಗಾಗಲೇ ಆಹಾರದ ವಿಷಯದಲ್ಲಿ ಶಾಕ್ ನೀಡಿರುವ ಆರೋಗ್ಯ ಇಲಾಖೆ ಇದೀಗ ಟ್ಯಾಟೂ ಪ್ರಿಯರಿಗೂ ಶಾಕ್ ನೀಡಲು ಮುಂದಾಗಿದೆ. ರಾಜ್ಯದಲ್ಲಿ ಟ್ಯಾಟೂ ಹಾಕುವವರಿಗೆ ಮತ್ತು ಹಾಕಿಸಿಕೊಳ್ಳವವರಿಬ್ಬರಿಗೂ ಅನ್ವಯವಾಗುವಂತೆ ಹೊಸ ಕಾನೂನು ರಚಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಹೊಸ ಕಾನೂನಿನಡಿಯಲ್ಲಿ ಅವೈಜ್ಞಾನಿಕವಾಗಿ, ಬೇಕಾಬಿಟ್ಟಿಯಾಗಿ, ಎಲ್ಲೆಂದರಲ್ಲಿ ಟ್ಯಾಟೂ ಹಾಕಿಸಿಕೊಳ್ಳುವವರಿಗೆ ರಾಜ್ಯ ಸರ್ಕಾರ ಕಡಿವಾಣ ಹಾಕುವ ಯೋಜನೆ ರೂಪಿಸುತ್ತಿದೆ.


ಏನದು ಹೊಸ ಕಾನೂನು ?
ಟ್ಯಾಟೂಗೆ ದೇಶದಲ್ಲಿ ಯಾವುದೇ ನಿಯಂತ್ರಣ ಕಾನೂನುಗಳಿಲ್ಲ. ಆದರೆ ಇದೇ ಮೊದಲ ಬಾರಿಗೆ ರಾಜ್ಯ ಸರ್ಕಾರ ಟ್ಯಾಟೂಗೆ ಹೊಸ ನಿಯಮ ಜಾರಿ ಮಾಡಲು ಸಜ್ಜಾಗಿದೆ. ಟ್ಯಾಟೂ ಹಾಕಿಸಿಕೊಳ್ಳುವರು ಕಡ್ಡಾಯವಾಗಿ ವೈದ್ಯರಿಂದ ತಪಾಸಣೆ ಪತ್ರ ಪಡೆದಿರಬೇಕು. ಟ್ಯಾಟೂ ಹಾಕುವರು ತಾವು ಬಳಸುವ ಬಣ್ಣ, ಕ್ಯಮಿಕಲ್, ಸೂಜಿ ಮತ್ತು ಸ್ವಚ್ಛತೆ ಕುರಿತಾಗಿ ಆರೋಗ್ಯ ಇಲಾಖೆಗೆ ಮಾಹಿತಿ ನೀಡುವಂತಹ ಹೊಸ ಮಾರ್ಗಸೂಚಿಗಳನ್ನು ತರಲು ರಾಜ್ಯ ಸರ್ಕಾರ ಮುಂದಾಗಿದೆ.
ಟ್ಯಾಟೂನಿಂದ ಹೆಚ್ಐವಿ, ಕ್ಯಾನ್ಸರ್ !
ಮಾರಣಾಂತಿಕ ಸೋಂಕುಗಳಾದ ಹೆಚ್ಐವಿ, ಚರ್ಮ ಕ್ಯಾನ್ಸರ್ ಹಾಗೂ ಚರ್ಮ ರೋಗ, ಹೆಪಟೈಟಿಸ್ ಬಿ, ಹೆಪಟೈಟಿಸ್ ಸಿ ಹಾಗೂ ಸ್ಟ್ಯಾಫಿಲೋಕೊಕಸ್ ಔರೆಸ್‌ನಂತಹ ಜನರಲ್ಲಿ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ತಪಾಸಣೆ ನಡೆಸಿದಾಗ ಈ ಸೋಂಕುಗಳು ಹರಡಲು ಟ್ಯೂಟೂ ಕೂಡ ಒಂದು ಕಾರಣವಾಗಿದೆ ಎಂಬುವುದು ತಿಳಿದಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹೊಸ ಕಾನೂನು ಜಾರಿಗೆ ತರಲು ಮುಂದಾಗಿದೆ.