ಸರ್ಕಾರಿ ಉದ್ಯೋಗ ವಂಚನೆ: ಸಿಎಂ ಸಹಿ ನಕಲು ಮಾಡಿದ ಆರೋಪಿ ಬಂಧನ

ಮಂಡ್ಯ : ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸರ್ಕಾರಿ ಅಧಿಕಾರಿಗಳ ಸಹಿಗಳನ್ನು ನಕಲು ಮಾಡಿ ನಕಲಿ ನೇಮಕಾತಿ ಆದೇಶಗಳನ್ನು ಸೃಷ್ಟಿಸಿ ಸರ್ಕಾರಿ ಕೆಲಸ ಕೊಡಿಸುವುದಾಗಿ ಸಾರ್ವಜನಿಕರನ್ನು ವಂಚಿಸಿ ಕೋಟ್ಯಂತರ ರು. ವಂಚಿಸಿರುವ ಆರೋಪಿಯನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದರು.
ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಗರದ ತಾವರಗೆರೆ ನಿವಾಸಿ ಎಚ್.ಸಿ.ವೆಂಕಟೇಶ್ ಬಂಧಿತ ಆರೋಪಿ.

ನಗರದ ಸಾಹುಕಾರ್ ಚನ್ನಯ್ಯ ಬಡಾವಣೆಯ ಎಸ್.ಕೆ.ಗಾಯಿತ್ರಿ ಅವರಿಂದ ಅಬಕಾರಿ ಇಲಾಖೆಯಲ್ಲಿ ಅವರ ಮಕ್ಕಳಿಗೆ ಕೆಲಸ ಕೊಡಿಸುವುದಾಗಿ ನಂಬಿಸಿ ೧೪ ಲಕ್ಷ ರು. ಪಡೆದು ವಂಚಿಸಿದ್ದಾನೆ. ನೇತ್ರಾವತಿ ಎಂಬುವರ ಮಗನಿಗೆ ಶಿಕ್ಷಣ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ೧೨.೨೪ ಲಕ್ಷ ರು. ಪಡೆದು ವಂಚಿಸಿದ್ದಾನೆ. ಇದೇ ರೀತಿ ಮತ್ತೊಬ್ಬರು ವಂಚನೆ ಪ್ರಕರಣ ದಾಖಲಿಸಿದ್ದಾರೆ ಎಂದು ವಿವರಿಸಿದರು.
30 ರಿಂದ 40 ಜನರಿಗೆ ವಂಚನೆ:
ಆರೋಪಿ ವೆಂಕಟೇಶ್ ತಾನು ವಿಧಾನಸೌಧದಲ್ಲಿ ಉನ್ನತ ದರ್ಜೆಯ ಅಧಿಕಾರಿಯಾಗಿದ್ದು, ಜನಪ್ರತಿನಿಧಿಗಳು, ಉನ್ನತ ಮಟ್ಟದ ಅಧಿಕಾರಿಗಳು ತಮಗೆ ಪರಿಚಯವಿದ್ದು, ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಸುಮಾರು ೩೦ ರಿಂದ ೪೦ ಜನರಿಂದ ಲಕ್ಷಾಂತರ ರು. ಹಣ ಪಡೆದು ವಂಚಿಸಿದ್ದಾನೆ. ಕೆಲವರನ್ನು ಜಿಲ್ಲಾಧಿಕಾರಿ ಕಚೇರಿಗೆ ಕರೆತಂದು ಕೆಲಸಕ್ಕೆ ಸೇರಿಸುವುದಾಗಿ ಹೇಳಿ ವಾಪಸ್ಸು ಕರೆದೊಯ್ದಿದ್ದಾನೆ. ಹಲವರನ್ನು ಅಬಕಾರಿ ಇಲಾಖೆಗೂ ಕರೆದೊಯ್ದು ಎಲ್ಲೆಡೆ ಸುತ್ತಾಡಿಸಿ ಕೆಲಸಕ್ಕೆ ನಿಯೋಜಿಸುವುದಾಗಿ ಹೇಳಿ ಮತ್ತೆ ವಾಪಸ್ಸು ಕರೆತಂದು ನಿಮಗೆ ನೀಡಿದ್ದ ನೇಮಕಾತಿ ಪತ್ರವನ್ನು ಮತ್ತೆ ಬೇರೆಡೆಗೆ ವರ್ಗಾಯಿಸಲಾಗಿದೆ ಎಂದು ಮತ್ತೊಂದು ನಕಲಿ ದಾಖಲೆ ಸೃಷ್ಠಿಸಿ ವಂಚನೆ ಮಾಡಿದ್ದಾನೆ. ಈತನ ವಂಚನೆ ಬಗೆದಷ್ಟು ಬೆಳಕಿಗೆ ಬರುತ್ತಿದೆ ಎಂದು ವಿವರಿಸಿದರು.
