ಜನರ ಜೀವ ಬಲಿ ಪಡೆಯುತ್ತಿರುವ ಸರ್ಕಾರಿ ಆಸ್ಪತ್ರೆಗಳು-ವೈದ್ಯರಿಲ್ಲದೆ ಸಾವಿಗೀಡಾದ ರೋಗಿ

ರಾಯಚೂರು : ಎದೆ ನೋವುತ್ತಿದೆ ಸ್ವಲ್ಪ ಪರೀಕ್ಷೆ ಮಾಡಿ ಜೀವ ಉಳಿಸಿ ಡಾಕ್ಟ್ರೇ ಎಂದು ಸರ್ಕಾರಿ ಆಸ್ಪತ್ರೆಗೆ ಬಂದರೆ ಅಲ್ಲಿ ಡ್ಯೂಟಿ ಡಾಕ್ಟರೇ ಇಲ್ಲ. ನಿಮಗೆ ಇಲ್ಲಿ ಚಿಕಿತ್ಸೆ ಸಿಗೊಲ್ಲ ಸಿಂಧನೂರಿಗೆ ಹೋಗಿ ಎಂದು ಹೇಳಿ ಸಾಗ ಹಾಕಿದ್ದಾರೆ. ಆದರೆ, ಡಾಕ್ಟರ್ ತನ್ನ ಜೀವ ಉಳಿಸುತ್ತಾರೆ ಎಂದು ಬಂದಿದ್ದ ವ್ಯಕ್ತಿಯನ್ನು ಮನೆಯವರು ದೊಡ್ಡ ಆಸ್ಪತ್ರೆಗೆ ಕರೆದೊಯ್ಯುವ ದಾರಿಯಲ್ಲಿಯೇ ಯುವಕ ಸಾವನ್ನಪ್ಪಿದ್ದಾನೆ.
ಸರ್ಕಾರಿ ಆಸ್ಪತ್ರೆ ವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡಿದ್ದರೂ ಆತನ ಜೀವ ಉಳಿಯುತ್ತಿತ್ತು. ಆದರೆ, ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೇ ದಾರಿ ಮಧ್ಯದಲ್ಲಿ ಹೃದಯಾಘಾತವಾಗಿ ಯುವಕ ಪ್ರಾಣ ಬಿಟ್ಟಿದ್ದಾನೆ.

ಈ ಘಟನೆ ರಾಯಚೂರು ಜಿಲ್ಲೆ ಮಸ್ಕಿ ತಾಲ್ಲೂಕಿನ ಪಗಡದಿನ್ನಿ ಕ್ಯಾಂಪ್‌ನಲ್ಲಿ ನಡೆದಿದೆ. ಶರಣಬಸವ (32) ಮೃತ ವ್ಯಕ್ತಿಯಾಗಿದ್ದಾನೆ. ತೀವ್ರವಾಗಿ ಎದೆ ನೋವುತ್ತಿದೆ, ಇದು ಹೃದಯಾಘಾತದ ಲಕ್ಷಣಗಳೇ ಇರಬೇಕು ಎಂದು ಎಚ್ಚೆತ್ತುಕೊಂಡ ಯುವಕ ಶರಣಬಸವ ತಕ್ಷವೇ ಹಳ್ಳಿಯಿಂದ ಮಸ್ಕಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬಂದಿದ್ದಾನೆ. ಆದರೆ, ಅಲ್ಲಿ ಶರಣಬಸವನಿಗೆ ಪ್ರಾಥಮಿಕ ಚಿಕಿತ್ಸೆ ನೀಡುವುದಕ್ಕೂ ವೈದ್ಯರೇ ಇರಲಿಲ್ಲ. ನೀವು ಇಲ್ಲಿ ವೈದ್ಯರಿಗಾಗಿ ಕಾಯದೇ ಸಿಂಧನೂರು ದೊಡ್ಡ ಆಸ್ಪತ್ರೆಗೆ ಶಿಫ್ಟ್ ಮಾಡುವಂತೆ ಹೇಳಿ ನರ್ಸ್ ಒಬ್ಬರು ಕೈತೊಳೆದುಕೊಂಡಿದ್ದಾರೆ.

ಆದರೆ, ಈಗಾಗಲೇ ಎದೆನೋವಿನಿಂದ ಬಳಲುತ್ತಿದ್ದ ಶರಣಬಸವನಿಗೆ ಸಮಾಧಾನ ಆಗುವಂತಹ ಪ್ರಾಥಮಿಕ ಚಿಕಿತ್ಸೆಯೂ ಸಿಗದ ಕಾರಣ, ಮನೆಯವರಿಗೆ ಕರೆ ಮಾಡಿ ಆಂಬುಲೆನ್ಸ್ ಮಾಡಿಕೊಂಡು ಸಿಂಧನೂರಿಗೆ ಹೋಗೋಣ ಎಂದು ಹೇಳಿದ್ದಾನೆ. ಆಗ ಮನೆಯವರು ಆಂಬುಲೆನ್ಸ್ ರೆಡಿ ಮಾಡಿಕೊಂಡು ಸಿಂಧನೂರು ದೊಡ್ಡ ಆಸ್ಪತ್ರೆಗೆ ಹೋಗಲು ಅಣಿಗೊಳಿಸಿದ್ದಾರೆ. ಇನ್ನು ಲಗುಬಗೆಯಲ್ಲಿ ದೊಡ್ಡ ಆಸ್ಪತ್ರೆಗೆ ಹೋಗುವ ಮಾರ್ಗದಲ್ಲಿಯೇ ತೀವ್ರವಾಗಿ ಎದೆನೋವಿನಿಂದ ಬಳಲಿದ ಶರಣಬಸವ ಮನೆಯವರ ಮಡಿಲಲ್ಲಿಯೇ ಒದ್ದಾಡಿ ಹೃದಯಾಘಾತದಿಂದ ಪ್ರಾಣ ಬಿಟ್ಟಿದ್ದಾನೆ.
ಮಸ್ಕಿ ತಾಲೂಕು ಆಸ್ಪತ್ರೆ ಆಗಿದ್ದರೂ ಕನಿಷ್ಠ ಪ್ರಾಥಮಿಕ ಚಿಕಿತ್ಸೆ ನೀಡುವುದಕ್ಕೂ ಒಬ್ಬ ವೈದ್ಯರು ಇರಲಿಲ್ಲ. ಅಲ್ಲಿ ವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡಿ ದೊಡ್ಡ ಆಸ್ಪತ್ರೆಗೆ ಕಳುಹಿಸಿದ್ದರೆ ಯುವಕನ ಜೀವ ಉಳಿಯುತ್ತಿತ್ತು. ಮಸ್ಕಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲದಿರುವುದೇ ಶರಣಬಸವನ ಸಾವಿಗೆ ಕಾರಣ ಎಂದು ಮನೆಯವರು ಹಾಗೂ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ. ಆಸ್ಪತ್ರೆ ಎಂದಮೇಲೆ ಡ್ಯೂಟಿ ಡಾಕ್ಟರ್ ಎಮರ್ಜೆನ್ಸಿ ರೋಗಿಗಳನ್ನು ನೋಡದೇ ಎಲ್ಲಿ ಹೋಗಿರುತ್ತಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.
