ಗೋಪಾಲ್ ಖೇಮ್ಕಾ ಹತ್ಯೆಕೋರ ಎನ್‌ಕೌಂಟರ್‌ನಲ್ಲಿ ಸಾವು: ಬಿಹಾರದಲ್ಲಿ ಗ್ಯಾಂಗ್‌ಸ್ಟರ್ ನ ಅಂತ್ಯ

ಪಟ್ನಾ: ಬಿಹಾರದ ಉದ್ಯಮಿ ಗೋಪಾಲ್ ಖೇಮ್ಕಾ ಹತ್ಯೆ ಪ್ರಕರಣದ ಆರೋಪಿ ವಿಕಾಸ್ ಅಲಿಯಾಸ್ ರಾಜಾ ಎಂಬಾತ ಪೊಲೀಸ್ ಎನ್‌ಕೌಂಟರ್‌ನಲ್ಲಿ ಹತ್ಯೆಯಾಗಿದ್ದಾನೆ. ಇಂದು ಮಂಗಳವಾರ ಮುಂಜಾನೆ ವೇಳೆ (ರಾತ್ರಿ 2:45) ಈ ಘಟನೆ ನಡೆದಿರುವುದು ವರದಿಯಾಗಿದೆ. ಗೋಪಾಲ್ ಖೇಮ್ಕಾ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ಹಾಗೂ ಎಸ್ಟಿಎಫ್ ತಂಡಗಳ ಪೊಲೀಸರು ರೇಡ್ ನಡೆಸುವಾಗ ಈ ಎನ್ಕೌಂಟರ್ ಸಂಭವಿಸಿದೆ ಎನ್ನಲಾಗಿದೆ.

ರೇಡ್ ಮಾಡಲು ಬಂದ ಪೊಲೀಸರ ಮೇಲೆ ವಿಕಾಸ್ ಗುಂಡಿನ ದಾಳಿ ನಡೆಸಲು ಮುಂದಾಗಿದ್ದ. ಇದಕ್ಕೆ ಪ್ರತಿಯಾಗಿ ಪೊಲೀಸರೂ ಫೈರಿಂಗ್ ನಡೆಸಿದ್ದಾರೆ. ಈ ವೇಳೆ, ಗುಂಡೇಟು ಬಿದ್ದು ಆರೋಪಿ ವಿಕಾಸ್ ಸ್ಥಳದಲ್ಲೇ ಸತ್ತಿದ್ದಾನೆ. ಸ್ಥಳದಿಂದ ಒಂದು ಪಿಸ್ತೂಲ್, ಒಂದು ಬುಲೆಟ್ ಮತ್ತು ಕಾರ್ಟ್ರಿಡ್ಜ್ ಅನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಈ ವ್ಯಕ್ತಿ ಅಕ್ರಮ ಶಸ್ತ್ರಾಸ್ತ್ರಗಳನ್ನು ತಯಾರಿಸುವ ಮತ್ತು ಮಾರುವ ದಂಧೆ ನಡೆಸುತ್ತಿದ್ದ ಎನ್ನಲಾಗಿದೆ. ಇದು ಪೊಲೀಸರು ನೀಡಿರುವ ಮಾಹಿತಿಯಾಗಿದೆ. ವಿಕಾಸ್ನ ಮೃತದೇಹವನ್ನು ಪೋಸ್ಟ್ ಮಾರ್ಟಮ್ ಪರೀಕ್ಷೆಗೆ ನಳಂದ ಮೆಡಿಕಲ್ ಕಾಲೇಜಿಗೆ ಕಳುಹಿಸಲಾಗಿದೆ.
ಜುಲೈ 4, ಶುಕ್ರವಾರದಂದು ಬಿಹಾರ ರಾಜಧಾನಿ ಪಟ್ನಾ ನಗರದಲ್ಲಿ ಗೋಪಾಲ್ ಖೇಮ್ಕಾ ಅವರನ್ನು ಗುಂಡಿಟ್ಟು ಹತ್ಯೆ ಮಾಡಲಾಗಿತ್ತು. ಗಾಂಧಿ ಮೈದಾನ್ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ, ಅವರ ಮನೆ ಹೊರಗೆ ಆ ಘಟನೆ ನಡೆದಿತ್ತು. ಖೇಮ್ಕಾ ಅವರು ತಮ್ಮ ಮನೆಯ ಗೇಟ್ ಬಳಿ ಕಾರಿನಲ್ಲಿ ಬಂದ ಕೂಡಲೇ ಅಲ್ಲೇ ಕಾದಿದ್ದ ಹೆಲ್ಮೆಟ್ಧಾರಿ ವ್ಯಕ್ತಿಯೊಬ್ಬ ಗುಂಡಿನ ದಾಳಿ ಮಾಡಿದ್ದ. ಬೈಕ್ನಲ್ಲಿ ಬಂದಿದ್ದ ಆತ ಕೂಡಲೇ ಅಲ್ಲಿಂದ ಪರಾರಿಯಾಗಿದ್ದ.

ಗೋಪಾಲ್ ಖೇಮ್ಕಾ ಬಿಜೆಪಿ ಪಕ್ಷಕ್ಕೆ ನಿಕಟವಾಗಿದ್ದರು. ಮಗಧ್ ಆಸ್ಪತ್ರೆಯ ಮಾಲೀಕರಾಗಿದ್ದ ಖೇಮ್ಕಾ, ಹಲವು ಸಾಮಾಜಿಕ ಸಂಘಟನೆಗಳೊಂದಿಗೆ ಜೋಡಿಸಿಕೊಂಡಿದ್ದರು.
ಆರೇಳು ವರ್ಷದ ಹಿಂದೆ (2018ರ ಡಿಸೆಂಬರ್ 20) ಗೋಪಾಲ್ ಖೇಮ್ಕಾ ಅವರ ಮಗ ಗುಂಜನ್ ಖೇಮ್ಕಾ ಅವರನ್ನೂ ಹಾಜಿಪುರ್ ಇಂಡಸ್ಟ್ರಿಯಲ್ ಏರಿಯಾದಲ್ಲಿ ಗುಂಡಿಟ್ಟು ಹತ್ಯೆ ಮಾಡಲಾಗಿತ್ತು.
ಈ ಕೊಲೆ ಪ್ರಕರಣ ಸಂಬಂಧ ಪೊಲೀಸರು ಇಬ್ಬರು ವ್ಯಕ್ತಿಗಳನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಹತ್ಯೆ ಮಾಡಲು ಶೂಟರ್ಗೆ ಕಾಂಟ್ರಾಕ್ಟ್ ಕೊಟ್ಟ ಆರೋಪ ಇರುವ ಒಬ್ಬ ವ್ಯಕ್ತಿಯೂ ಕಸ್ಟಡಿಯಲ್ಲಿದ್ದಾನೆ.
